ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ನೀರಿನ ಬೇಡಿಕೆ ಹಾಗೂ ಸಾಧ್ಯವಿರುವ ನೀರಿನ ಅಭಾವವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಮಗ್ರ ತಯಾರಿಯನ್ನು ಮಾಡಿಕೊಂಡಿದೆ ಎಂದು ಮಂಡಳಿ ಅಧ್ಯಕ್ಷ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಬೇಸಿಗೆ ಸಿದ್ಧತೆಗಳನ್ನು ಅವಲೋಕಿಸಿದ ನಂತರ ಮಾತನಾಡಿದ ಅವರು, ಈ ಬಾರಿ ನಗರದಾದ್ಯಂತ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಜಲಮಂಡಳಿ ಸಜ್ಜಾಗಿದೆ ಎಂದರು.
ನಗರದ ನೀರಿನ ಅಭಾವ ಎದುರಾಗಬಹುದಾದ ಹಾಗೂ ಜನಸಾಂದ್ರಿತ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇಂತಹ ಪ್ರದೇಶಗಳ ನಿವಾಸಿಗಳಿಗೆ ಉಚಿತ ಕುಡಿಯುವ ನೀರು ಒದಗಿಸಲು ‘ಮಿನಿ ವಾಟರ್ ಟ್ಯಾಂಕ್ಗಳು’ (ಸಿಂಟೆಕ್ಸ್ ಟ್ಯಾಂಕ್ಗಳು) ಅಳವಡಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಮಿನಿ ಟ್ಯಾಂಕ್ಗಳಿಗೆ ನೀರು ತುಂಬಿಸಲು ಬಿಡಬ್ಲ್ಯೂಎಸ್ಸಿಬಿ ಟ್ಯಾಂಕರ್ಗಳು ಮತ್ತು ಸಂಚಾರಿ ಕಾವೇರಿ ಟ್ಯಾಂಕರ್ಗಳಿಗೆ ಆದ್ಯತೆ ನೀಡಬೇಕು, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಖಾಸಗಿ ಟ್ಯಾಂಕರ್ಗಳನ್ನು ಬಾಡಿಗೆಗೆ ಪಡೆಯಬೇಕು ಎಂದು ಅಧ್ಯಕ್ಷರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೇಸಿಗೆ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಎಚ್ಚರಿಸಿದ ಅವರು, ಮುಖ್ಯ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ನೀರು ಪರಿವೀಕ್ಷಕರು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದಲ್ಲೇ ಹಾಜರಿರಬೇಕು ಎಂದು ನಿರ್ದೇಶನ ನೀಡಿದರು.
“ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು; ಗುರುತಿಸಲಾದ ಪ್ರದೇಶಗಳಿಗೆ ನೀರು ತಲುಪುವುದನ್ನು ಖಚಿತಪಡಿಸಬೇಕು,” ಎಂದು ಡಾ. ಮನೋಹರ್ ಖಡಕ್ ಸೂಚನೆ ನೀಡಿದರು.
