ಚೆನ್ನೈ : ಮಧ್ಯಮ ಸರದಿಯ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಅರ್ಧಶತಕದ(50 ರನ್, 34 ಎಸೆತ, 4 ಸಿಕ್ಸರ್)ಕೊಡುಗೆ, ಶಹಬಾಝ್ ಅಹ್ಮದ್ ಆಲ್‌ರೌಂಡ್ ಆಟದ(18 ರನ್,3-23) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ನಡೆದ ಐಪಿಎಲ್ ಟೂರ್ನಿಯ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 36 ರನ್ ಅಂತರದಿಂದ ಮಣಿಸಿದೆ.
ಈ ಗೆಲುವಿನ ಮೂಲಕ ಮೇ 26ರಂದು ಚೆನ್ನೈನಲ್ಲಿ ನಡೆಯುವ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಸನ್‌ರೈಸರ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು.ಗೆಲ್ಲಲು 176 ಗುರಿ ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ರಾಜಸ್ಥಾನದ ಪರ ಧ್ರುವ್ ಜುರೆಲ್(ಔಟಾಗದೆ 56, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 42 ರನ್(21 ಎಸೆತ, 4 ಬೌಂಡರಿ,3 ಸಿಕ್ಸರ್)ಗಳಿಸಿ ಒಂದಷ್ಟು ಪ್ರತಿರೋಧ ಒಡಿದ್ದರು.ಉಳಿದವರು ಪೆವಿಲಿಯನ್‌ಗೆ ಪರೇಡ್ ನಡೆಸಿದರು.
ಸನ್‌ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ಅಹ್ಮದ್(3-23)ಯಶಸ್ವಿ ಬೌಲರ್ ಎನಿಸಿಕೊಂಡರು. ಅಭಿಷೇಕ್ ಶರ್ಮಾ(2-24), ಪ್ಯಾಟ್ ಕಮಿನ್ಸ್(1-30)ಹಾಗೂ ನಟರಾಜನ್(1-13)ನಾಲ್ಕು ವಿಕೆಟ್ ಹಂಚಿಕೊಂಡರು.
ಇದಕ್ಕೂ ಮೊದಲು ಇನಿಂಗ್ಸ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(12 ರನ್)ವಿಕೆಟನ್ನು ಕಬಳಿಸಿದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹೈದರಾಬಾದ್‌ಗೆ ಆರಂಭಿಕ ಆಘಾತ ನೀಡಿದರು. ನ್ಯೂಝಿಲ್ಯಾಂಡ್ ಆಟಗಾರ ಬೌಲ್ಟ್ ಪವರ್ ಪ್ಲೇ ಒಳಗೆ ರಾಹುಲ್ ತ್ರಿಪಾಠಿ(37 ರನ್, 15 ಎಸೆತ) ಹಾಗೂ ಮರ್ಕ್ರಮ್(1) ವಿಕೆಟನ್ನು ಉರುಳಿಸಿ ಹೈದರಾಬಾದ್‌ಗೆ ಆರಂಭದಲ್ಲಿ ಕಡಿವಾಣ ಹಾಕಿದರು.
ಇನ್ನೋರ್ವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್(34 ರನ್,28 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕ್ಲಾಸೆನ್ 4ನೇ ವಿಕೆಟ್‌ಗೆ 30 ಎಸೆತಗಳಲ್ಲಿ 42 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಹೆಡ್ ವಿಕೆಟನ್ನು ಉರುಳಿಸಿದ ಸಂದೀಪ್ ಶರ್ಮಾ ಈ ಜೋಡಿಯನ್ನು ಬೇರ್ಪಡಿಸಿದರು. ನಿತಿಶ್ ಕುಮಾರ್ ರೆಡ್ಡಿ (5 ರನ್) ಹಾಗೂ ಅಬ್ದುಲ್ ಸಮದ್(0)ವೇಗದ ಬೌಲರ್ ಅವೇಶ್ ಖಾನ್(3-27) ಅವರ ಸತತ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.
ಆಗ ಹೈದರಾಬಾದ್ 120 ರನ್‌ಗೆ ಆರನೇ ವಿಕೆಟ್ ಕಳೆದುಕೊಂಡಿತು. ಕ್ಲಾಸೆನ್ ಅವರು ಶಹಬಾಝ್ ಅಹ್ಮದ್(18 ರನ್, 18 ಎಸೆತ) ಅವರೊಂದಿಗೆ 7ನೇ ವಿಕೆಟ್‌ಗೆ 25 ಎಸೆತಗಳಲ್ಲಿ 43 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು ಹಿಗ್ಗಿಸಿದರು. ಅಂತಿಮವಾಗಿ ಹೈದರಾಬಾದ್ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
ಕೊನೆಯ ಓವರ್‌ನಲ್ಲಿ ಕೇವಲ 6 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದ ಅವೇಶ್ ಖಾನ್ ಅತ್ಯುತ್ತಮ ಬೌಲಿಂಗ್ ಮಾಡಿದರು.
ರಾಜಸ್ಥಾನದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್(3-45) ಹಾಗೂ ಅವೇಶ್ ಖಾನ್(3-27) ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಸಂದೀಪ್ ಶರ್ಮಾ(2-25) ಎರಡು ವಿಕೆಟ್ ಪಡೆದು ಸಾಥ್ ನೀಡಿದರು.
ಸಂಕ್ಷಿಪ್ತ ಸ್ಕೋರ್
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 175/9
(ಹೆನ್ರಿಕ್ ಕ್ಲಾಸೆನ್ 50, ರಾಹುಲ್ ತ್ರಿಪಾಠಿ 37, ಟ್ರಾವಿಸ್ ಹೆಡ್ 34, ಟ್ರೆಂಟ್ ಬೌಲ್ಟ್ 3-45, ಅವೇಶ್ ಖಾನ್ 3-27, ಸಂದೀಪ್ ಶರ್ಮಾ 2-25)
ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 139/7
(ಯಶಸ್ವಿ ಜೈಸ್ವ್ವಾಲ್ 42,ಧ್ರುವ್ ಜುರೆಲ್ ಔಟಾಗದೆ 56, ಶಹಬಾಝ್ ಅಹ್ಮದ್ 3-23, ಅಭಿಷೇಕ್ ಶರ್ಮಾ 2-24)
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.