ಬೆಂಗಳೂರು: ಇನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ (ಇ.ಡಿ.) ಸಂಸ್ಥೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಹಿನ್ನೆಲೆ, ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮಹತ್ವಪೂರ್ಣವಾಗಿದೆ ಎಂದು ಬಮುಲ್ ಅಧ್ಯಕ್ಷ ಹಾಗೂ ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಮಂಗಳವಾರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅತ್ಯಂತ ಪ್ರಮುಖವಾಗಿದೆ. ಇ.ಡಿ. ಸಂಸ್ಥೆಯ ಹಸ್ತಕ್ಷೇಪ, ಅತಿರೇಕ ಹಾಗೂ ದುರ್ಬಳಕೆಗೆ ಇದು ಮತ್ತೊಂದು ಎಚ್ಚರಿಕೆಯ ಘಂಟೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆ ಹೇಗೆ ಶಿಷ್ಟಾಚಾರ ಮೀರಿ ವರ್ತಿಸುತ್ತಿದೆಯೆಂಬುದನ್ನು ನ್ಯಾಯಾಲಯಗಳೇ ತೋರಿಸುತ್ತಿವೆ,” ಎಂದರು.
“ಕೆಲ ದಿನಗಳ ಹಿಂದೆ ಮದ್ರಾಸ್ ಹೈಕೋರ್ಟ್ ಕೂಡ ಇ.ಡಿ ಅಧಿಕಾರಿಗಳ ವರ್ತನೆಗೆ ತರಾಟೆ ನೀಡಿತ್ತು. ಇವು ಎಲ್ಲವೂ ಇ.ಡಿಯನ್ನು ರಾಜಕೀಯ ದಾಳಿಗಾಗಿ ಉಪಯೋಗಿಸುತ್ತಿರುವುದಕ್ಕೆ ಸಾಕ್ಷಿ,” ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಇದರ ಬದಲಿಗೆ ಅಭಿವೃದ್ಧಿ, ಯುವಜನರ ಭವಿಷ್ಯ ಹಾಗೂ ದೇಶದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಗಮನಹರಿಸಬೇಕು. ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿಯ ಮಾರ್ಗದಲ್ಲಿ ನಡೆಯಲಿ,” ಎಂದು ಆಗ್ರಹಿಸಿದರು.
ಇ.ಡಿಯಿಂದ ರಾಜಕೀಯ ನಾಯಕರುಗಳಿಗೆ ಹಾನಿಯಾಗುತ್ತಿದೆಯೆಂದು ಕೇಳಿದಾಗ, “ರಾಜಕೀಯದಲ್ಲಿ ಎಲ್ಲವನ್ನೂ ಎದುರಿಸಲು ನಾವು ಸಿದ್ಧ. ಆದರೆ ಇವು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಷಡ್ಯಂತ್ರ ರೂಪದಲ್ಲಿ ಬಳಸಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನ್ಯಾಯದ ಬಲವನ್ನು ಪುನಸ್ಥಾಪನೆ ಮಾಡಿದೆ ಎಂದು ನಾನು ನಂಬುತ್ತೇನೆ,” ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲಿನ ಇ.ಡಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ ಅವರು, “ನಮ್ಮ ಪ್ರಕರಣಗಳು ಮುಕ್ತಾಯದ ಹಂತದಲ್ಲಿದ್ದರೂ ಹೊಸದಾಗಿ ಸಿಬಿಐ, ಐಟಿ ಇಲಾಖೆಗಳಿಗೆ ಪತ್ರಗಳು ಬರುತ್ತಿದ್ದವು. ಇದು ನ್ಯಾಯಾಂಗ ಪ್ರಕ್ರಿಯೆಯ ಹಾದಿ ಅಲ್ಲ, ಇದು ನಾಯಕರನ್ನು ಗುರಿಯಾಗಿಸಿಕೊಂಡಿರುವ ರಾಜಕೀಯ ಚತುರತೆ,” ಎಂದು ಆರೋಪಿಸಿದರು.
“ಇದು ನ್ಯಾಯಕ್ಕಾಗಿ ನಡೆಯುವ ಹೋರಾಟವಲ್ಲ. ತಪ್ಪು-ಸರಿಯನ್ನ ನಿರ್ಧರಿಸಲು ತನಿಖೆ ನಡೆಯುತ್ತಿಲ್ಲ. ತಪ್ಪು ಸಿಕ್ಕಿಲ್ಲ ಎಂದರೆ, ಬೇರೆ ಕಡೆ ಸಿಲುಕಿಸುವ ತಂತ್ರವನ್ನ ಕೇಂದ್ರ ಸರ್ಕಾರ ಬಳಸುತ್ತಿದೆ,” ಎಂದು ಆರೋಪಿಸಿದರು.
ಅವರು ಕೊನೆಗೆ ಹೇಳಿದ್ದು, “ದೇಶದ ಪ್ರಗತಿ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ, ಸಂವಿಧಾನಾತ್ಮಕ ಸಂಸ್ಥೆಗಳ ಗೌರವ ಕಾಪಾಡುವುದು ಮುಖ್ಯ. ತನಿಖಾ ಸಂಸ್ಥೆಗಳ ದುರ್ಬಳಕೆ ದೇಶದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ,” ಎಂದರು.