ಬೆಂಗಳೂರು: ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಪತಿ–ಪತ್ನಿಯ ಜಗಳ ತಾರಕಕ್ಕೇರಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಒಡಿಶಾ ಮೂಲದ ದೀಪಾಂತ್ ಸಬರ (31) ಮತ್ತು ಅವರ ಪತ್ನಿ ಮಂಜುಳಾ ಸಬರ (27) ಎಂದು ಗುರುತಿಸಲಾಗಿದೆ. ಇವರು ಸುಮಾರು 20 ದಿನಗಳ ಹಿಂದೆ ಬಾಡಿಗೆ ಮನೆಗೆ ವಾಸವಾಗಿದ್ದು, ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳ ನಡುವೆ ಜಗಳ ಉಂಟಾಗಿ ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಪತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮನೆ ಮಾಲೀಕ ಶಿವಕುಮಾರ್ 20 ದಿನಗಳ ಹಿಂದೆ ಮನೆ ಬಾಡಿಗೆ ನೀಡಿದ್ದರು. ಗುರುವಾರ ರಾತ್ರಿ ಶಿವಕುಮಾರ್ ಅವರ ತಾಯಿ ಚೌಡಮ್ಮ ಮನೆ ಬಳಿ ಪರಿಶೀಲನೆ ನಡೆಸಿದಾಗ ಮಂಚದ ಮೇಲೆ ಮಹಿಳೆಯ ಮೃತದೇಹ ಕಂಡುಬಂದಿದೆ. ತಕ್ಷಣವೇ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪತ್ನಿಯ ಮೃತದೇಹದ ಮುಂದೆ ಪತಿ ಅಳುತ್ತಾ ವಿಡಿಯೋ ದಾಖಲಿಸಿಕೊಂಡಿದ್ದು, ಬಳಿಕ ನೇಣಿಗೆ ಶರಣಾಗಿರುವುದು ಮೊಬೈಲ್ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಒಡಿಶಾ ಭಾಷೆಯಲ್ಲಿ ಡೆತ್ ನೋಟ್ ಬರೆದಿರುವುದೂ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಘಟನೆ ಎರಡು ದಿನಗಳ ಹಿಂದೆಯೇ ನಡೆದಿರಬಹುದೆಂದು ಶಂಕಿಸಲಾಗಿದ್ದು, ಮೃತದೇಹಗಳು ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಡಿವೈಎಸ್ಪಿ ಮಲ್ಲೇಶ್ ಗೌಡ ಹಾಗೂ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
