ಬೆಳಗಾವಿ: ಸೂರ್ಯನಗರ 1ನೇ ಹಂತದ ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾ ನೀಡುವಲ್ಲಿ ಗೃಹ ಮಂಡಳಿಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದರು.
ಸದಸ್ಯ ಸುನಿಲ್ ವಲ್ಯಾಪುರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು, ಸೂರ್ಯನಗರ 1ನೇ ಹಂತವು ಚಂದಾಪುರ ಮತ್ತು ಬೊಮ್ಮಸಂದ್ರ ಪುರಸಭೆಗಳ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. ಈ ಬಡಾವಣೆಯನ್ನು ಆಡಳಿತಾತ್ಮಕವಾಗಿ ಹಸ್ತಾಂತರಿಸಿಕೊಳ್ಳಲು ಎರಡೂ ಪುರಸಭೆಗಳಿಗೆ ಗೃಹ ಮಂಡಳಿ ಹಲವು ಬಾರಿ ಪತ್ರ ಬರೆದಿದೆ ಎಂದು ಅವರು ತಿಳಿಸಿದರು.
ಹಸ್ತಾಂತರ ಪೂರ್ಣಗೊಂಡ ನಂತರ ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾ ಮಾಡಿಕೊಡುವ ಜವಾಬ್ದಾರಿ ಪುರಸಭೆಗಳದ್ದೇ ಎಂದು ಸಚಿವರು ಹೇಳಿದರು.
ಆದಾಗ್ಯೂ, ಸರ್ಕಾರದ ಆದೆಶದಂತೆ ಗೃಹ ಮಂಡಳಿಯೇ ನೇರವಾಗಿ 1 ತಿಂಗಳೊಳಗೆ ಇ-ಖಾತಾ ನೀಡುವ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.
ಸೂರ್ಯನಗರ 1ನೇ ಹಂತದಲ್ಲಿಯೇ ಡಾಂಬರೀಕೃತ ರಸ್ತೆಗಳು, ಮಳೆ ನೀರಿನ ಚರಂಡಿ, ಒಳಚರಂಡಿ, ಉದ್ಯಾನಗಳು, ಕಾವೇರಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.
ಗೃಹ ಮಂಡಳಿಯ ಕಾಯ್ದೆಯನ್ವಯ ಯೋಜನೆಗಳು ಲಾಭ–ನಷ್ಟವಿಲ್ಲದ ಆಧಾರದಲ್ಲಿ ಜಾರಿಯಾಗುತ್ತವೆ ಮತ್ತು ಬಡಾವಣೆಯ ನಿರ್ವಹಣಾ ವೆಚ್ಚವನ್ನು ಮಾತ್ರ ನಿವಾಸಿಗಳಿಂದ ವಸೂಲಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.
