Home ಬೆಂಗಳೂರು ನಗರ Karnataka| ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯುವ ಸಾಧ್ಯತೆ, ಮೇ 25ರಂದು ಮಹತ್ವದ ಸಭೆ

Karnataka| ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯುವ ಸಾಧ್ಯತೆ, ಮೇ 25ರಂದು ಮಹತ್ವದ ಸಭೆ

44
0
Suspension order of 18 BJP MLAs likely to be revoked, important meeting on May 25

ಬೆಂಗಳೂರು: ವಿಧಾನಸಭಾ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಬಿಜೆಪಿಯ 18 ಮಂದಿ ಶಾಸಕರನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಿದ್ದ ಆದೇಶವನ್ನು ಹಿಂಪಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಸಭಾ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಉಪಸ್ಥಿತಿಯಲ್ಲಿ ಮೇ 25ರಂದು ಮಹತ್ವದ ಸಭೆ ನಡೆಯಲಿದೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ‘ಹನಿಟ್ರ್ಯಾಪ್’ ವಿಚಾರವನ್ನು ಮುಂದಿಟ್ಟುಕೊಂಡು ಮಾರ್ಚ್ 21ರಂದು ಬಿಜೆಪಿ ಸದಸ್ಯರು ವಿಧಾನಸಭೆ ಕಲಾಪದಲ್ಲಿ ಗದ್ದಲ ಸೃಷ್ಟಿಸಿ, ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದರು. ಈ ವೇಳೆ ಬಿಜೆಪಿಯ 18 ಮಂದಿ ಸದಸ್ಯರು ಸ್ಪೀಕರ್ ಪೀಠದ ಮೇಲೇ ಏರಿ, ಕಾಗದ ಪತ್ರಗಳನ್ನು ಹರಿದು, ಎಸೆದು ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ್ದರು.

ಆ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು, ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡಣ್ಣ ಗೌಡ ಪಾಟೀಲ್, ಬಿಜೆಪಿಯ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಡಾ.ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್, ಎಂ.ಆರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಯಶಪಾಲ್ ಸುವರ್ಣ, ಹರೀಶ್ ಬಿ.ಪಿ., ಡಾ.ಭರತ್ ಶೆಟ್ಟಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ ಅವರನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಿದ್ದರು.

ಈ ಮಧ್ಯೆ ಬಿಜೆಪಿ ಶಾಸಕರು, ‘ಜನಪ್ರತಿನಿಧಿಗಳಾಗಿ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ತಮ್ಮ ಅಮಾನತು ಆದೇಶ ಹಿಂಪಡೆಯಲು ಸ್ಪೀಕರ್ ಹಾಗೂ ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕು’ ಎಂದು ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ಕೈಗೊಳ್ಳಲು ಸ್ಪೀಕರ್ ಹಾಗೂ ಸಿಎಂಗೆ ಸಚಿವ ಸಂಪುಟ ಅಧಿಕಾರವನ್ನು ನೀಡಿದೆ.

ಹೀಗಾಗಿ 18 ಮಂದಿ ಬಿಜೆಪಿಯ ಶಾಸಕರ ಅಮಾನತು ಆದೇಶವನ್ನು ಹಿಂಪಡೆಯುವ ಸಂಬಂಧ ಮೇ 25ರಂದು ಸಭೆ ನಡೆಸಿ, ತೀರ್ಮಾನ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here