ಪಲ್ಲೆಕೆಲೆ: ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಶ್ರೀಲಂಕಾ ಬಗ್ಗು ಬಡಿದೆ.
ಹೌದು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 181 ರನ್ ಗಳಿಸಿತು. ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ 54, ಟ್ರಾವಿಸ್ ಹೆಡ್ 56 ರನ್ ಗಳಿಂದ ಉತ್ತಮ ಆರಂಭ ನೀಡಿದರು.
ಆದರೆ ತದನಂತರ ಬಂದ ಕ್ಯಾಮರೂನ್ ಗ್ರೀನ್ ಕೇವಲ 3 ರನ್ ಗಳಿಗೆ ಔಟಾದರೆ, ಟಿಮ್ ಡೇವಿಡ್ 6, ಜೊಸ್ ಇಂಗ್ಲೀಷ್ 27, ಗ್ಲೇನ್ ಮ್ಯಾಕ್ಸ್ ವೆಲ್ 22 ರನ್ ಗಳಿಸಿದರು. ಉಳಿದಂತೆ ಯಾವೊಬ್ಬ ಆಟಗಾರರು ಎರಡಂಕಿ ದಾಟಲಿಲ್ಲ. ಇದರಿಂದಾಗಿ ನಿಗದಿತ ಓವರ್ ಗಳಲ್ಲಿ 181 ರನ್ ಗಳಿಸಿದ ಆಸ್ಟ್ರೇಲಿಯಾ ಶ್ರೀಲಂಕಾ ಗೆಲ್ಲಲು 182 ರನ್ ಗಳ ಗುರಿ ನೀಡಿತು.
ಆಸ್ಟ್ರೇಲಿಯಾ ನೀಡಿದ ಗೆಲುವಿನ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ಪರ ಪಥುಮ್ ನಿಶಾಂಕಾ ಆಕರ್ಷಕ ಶತಕ ಸಿಡಿಸಿದರು. 52 ಎಸೆತಗಳಲ್ಲಿ 5 ಸಿಕ್ಸರ್, 10 ಬೌಂಡರಿ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕುಶಾಲ್ ಮೆಂಡಿಸ್ 51 ರನ್ ಸಿಡಿಸಿದರು.
ಬಳಿಕ ಪವನ್ ರತ್ನಯ್ಯ (rathnayake) 28 ರನ್ ಗಳಿಸಿದರು. ಇದರಿಂದಾಗಿ ಶ್ರೀಲಂಕಾ 18 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 184 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು.
