ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಹೋಟೆಲ್ನಲ್ಲಿ ತಂಗಿದ್ದ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪಾಕಿಸ್ತಾನದ ಆಟಗಾರನೊಬ್ಬನಿಗೆ ತಂಡದ ವ್ಯವಸ್ಥಾಪಕರು ದಂಡ ವಿಧಿಸಿದ್ದಾರೆ ಎಂದು ಗುರುವಾರ ವರದಿಯೊಂದು ತಿಳಿಸಿದೆ. ಆತಿಥೇಯ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಕೊನೆಯ ಸೂಪರ್ 8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ತಂಡದ ವಲಯಗಳಲ್ಲಿ ಈ ಬಗ್ಗೆ ಗುಸುಗುಸು ಚರ್ಚೆಯಾಗುತ್ತಿದೆ ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿ ಮಾಡಿದೆ.
‘ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ಕೊನೆಯ ಸೂಪರ್ 8 ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ವಿಶ್ವಕಪ್ ತಂಡದ ಆಟಗಾರರೊಬ್ಬರು ಮಹಿಳಾ ಹೌಸ್ಕೀಪಿಂಗ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಸಿಬ್ಬಂದಿ ಸಹಾಯಕ್ಕಾಗಿ ಕೂಗಿದಾಗ, ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಬಂದಿದ್ದಾರೆ ಮತ್ತು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ವಿಷಯ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿಯಲ್ಲಿ ತಿಳಿಸಿದೆ.
‘ಗೋಲ್ಡನ್ ಕ್ರೌನ್ ಹೋಟೆಲ್ನ ಉನ್ನತ ಆಡಳಿತ ಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಬಯಸಿತು. ಆದರೆ, ನವೈದ್ ಚೀಮಾ ಅವರು ಆಟಗಾರನ ಪರವಾಗಿ ಕ್ಷಮೆಯಾಚಿಸಿದರು ಮತ್ತು ಅನುಚಿತ ವರ್ತನೆಗಾಗಿ ಆಟಗಾರನಿಗೆ ದಂಡ ವಿಧಿಸಿದರು’ ಎಂದು ವರದಿ ತಿಳಿಸಿದೆ.
ಆ ಪಂದ್ಯವನ್ನು ಪಾಕಿಸ್ತಾನ ಐದು ರನ್ಗಳಿಂದ ಗೆದ್ದರೂ, ನೆಟ್ ರನ್ ರೇಟ್ ಉತ್ತಮವಾಗಿಲ್ಲದ ಕಾರಣ ಸೆಮಿಫೈನಲ್ ತಲುಪಲು ತಂಡ ವಿಫಲವಾಯಿತು. ಬಳಿಕ ಭಾನುವಾರ ಮತ್ತು ಸೋಮವಾರ ಬ್ಯಾಚ್ಗಳಲ್ಲಿ ಮನೆಗೆ ಮರಳಿತು.
ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಪಾಕಿಸ್ತಾನಿ ಆಟಗಾರರು ಮತ್ತು ಬ್ಯಾಕ್ರೂಮ್ ಸಿಬ್ಬಂದಿ ಪ್ರವಾಸಗಳಲ್ಲಿ ದುರ್ವರ್ತನೆಯ ಇತಿಹಾಸವನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಪಾಕಿಸ್ತಾನ ಶಾಹೀನ್ ತಂಡದ ಇಂಗ್ಲೆಂಡ್ ಪ್ರವಾಸದಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವ ಬ್ಯಾಟ್ಸ್ಮನ್ ಹೈದರ್ ಅಲಿಯನ್ನು ಕಳೆದ ವರ್ಷ ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದರು. ಹೈದರ್ ನ್ಯಾಯಾಲಯದ ಮುಂದೆ ಹಾಜರಾದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆ ಮಾಡಲಾಯಿತು ಎಂದು ವರದಿ ಹೇಳಿಕೊಂಡಿದೆ.
ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಪ್ರವಾಸದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪಾಕಿಸ್ತಾನ ತಂಡದ ಮಸಾಜ್ ಪಟು ಮಲಾಂಗ್ ಅಲಿ ಅವರ ಮೇಲೂ ದೂರು ದಾಖಲಾಗಿ ದಂಡ ವಿಧಿಸಲಾಯಿತು.
