ಸೈಂಟ್ ಲೂಸಿಯಾ : ಆರಂಭಿಕ ಬ್ಯಾಟರ್ ಟ್ರಾವಿಡ್ ಹೆಡ್(76 ರನ್, 43 ಎಸೆತ, 9 ಬೌಂಡರಿ, 4 ಸಿಕ್ಸರ್)ಏಕಾಂಗಿ ಹೋರಾಟದ ಹೊರತಾಗಿಯೂ ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ 24 ರನ್ ಅಂತರದಿಂದ ಸೋಲುಂಡಿದೆ. ಈ ಸೋಲಿನ ಮೂಲಕ ಆಸ್ಟ್ರೇಲಿಯದ ಸೆಮಿ ಫೈನಲ್ ಹಾದಿ ಕಠಿಣವಾಗಿದೆ.
ಭಾರತವು ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಸೋಮವಾರ ಟಾಸ್ ಜಯಿಸಿದ ಆಸೀಸ್ ನಾಯಕ ಮಿಚೆಲ್ ಮಾರ್ಷ್ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿದರು. ನಾಯಕ ರೋಹಿತ್ ಶರ್ಮಾ(92 ರನ್, 41 ಎಸೆತ, 7 ಬೌಂಡರಿ, 8 ಸಿಕ್ಸರ್)ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.
ಗೆಲ್ಲಲು 206 ರನ್ ಗುರಿ ಪಡೆದ ಆಸ್ಟ್ರೇಲಿಯ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ಹೆಡ್ ಸರ್ವಾಧಿಕ ಸ್ಕೋರ್ ಗಳಿಸಿದರೆ, ನಾಯಕ ಮಿಚೆಲ್ ಮಾರ್ಷ್(37 ರನ್)ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(19 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಪರ ವೇಗದ ಬೌಲರ್ ಅರ್ಷದೀಪ್ ಸಿಂಗ್(3-37)ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್(2-24) ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು 2ನೇ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ(0)ವಿಕೆಟನ್ನು ಕಳೆದುಕೊಂಡ ಭಾರತವು ಕಳಪೆ ಆರಂಭ ಪಡೆದಿತ್ತು. ಆಗ ತಂಡಕ್ಕೆ ಆಸರೆಯಾದ ರೋಹಿತ್ ಹಾಗೂ ರಿಷಭ್ ಪಂತ್(15 ರನ್)ಎರಡನೇ ವಿಕೆಟ್‌ಗೆ 38 ಎಸೆತಗಳಲ್ಲಿ 87 ರನ್ ಜೊತೆಯಾಟ ನಡೆಸಿದರು. ಇದರಲ್ಲಿ ರೋಹಿತ್ ಕೊಡುಗೆ 70 ರನ್ ಇತ್ತು. ಇದು ಇನಿಂಗ್ಸ್‌ನಲ್ಲಿ ಮೂಡಿ ಬಂದ ಗರಿಷ್ಠ ರನ್ ಜೊತೆಯಾಟವಾಗಿದೆ. ರೋಹಿತ್ ವೇಗಿ ಸ್ಟಾರ್ಕ್ ಎಸೆದ 2ನೇ ಓವರ್‌ನಲ್ಲಿ 29 ರನ್ ಸಿಡಿಸಿದರು.
ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ರೋಹಿತ್ 50 ರನ್ ಪೂರೈಸಿದರು. ಈ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ವೇಗದ ಅರ್ಧಶತಕ ಗಳಿಸಿದರು. 12ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದ ರೋಹಿತ್ ಕೇವಲ 8 ರನ್‌ನಿಂದ ಶತಕ ವಂಚಿತರಾದರು. ಟಿ-20 ವಿಶ್ವಕಪ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಎರಡನೇ ನಾಯಕ ಎನಿಸಿಕೊಂಡರು. ಕ್ರಿಸ್ ಗೇಲ್ 2010ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ಭಾರತದ ವಿರುದ್ಧ ನಾಯಕನಾಗಿ 98 ರನ್ ಗಳಿಸಿದ್ದರು.
ಸೂರ್ಯಕುಮಾರ್ ಯಾದವ್(31 ರನ್, 16 ಎಸೆತ), ಶಿವಂ ದುಬೆ(28 ರನ್, 22 ಎಸೆತ)ಹಾಗೂ ಹಾರ್ದಿಕ್ ಪಾಂಡ್ಯ(ಔಟಾಗದೆ 27, 17 ಎಸೆತ)ಉಪಯುಕ್ತ ಕೊಡುಗೆ ನೀಡಿ ಭಾರತದ ಸ್ಕೋರನ್ನು 200ರ ಗಡಿ ದಾಟಿಸಿದರು.
ಆಸ್ಟ್ರೇಲಿಯದ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್(2-45) ಹಾಗೂ ಮಾರ್ಕಸ್ ಸ್ಟೋಯಿನಿಸ್(2-56) ಹೆಚ್ಚು ರನ್ ಬಿಟ್ಟುಕೊಟ್ಟರೂ ತಲಾ ಎರಡು ವಿಕೆಟ್ ಪಡೆದರು.
ಆಸ್ಟ್ರೇಲಿಯ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.