ಬೆಂಗಳೂರು:
‘ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ: ಬಿ.ಎಲ್.ಸಂತೋಷ್’ ಎಂಬ ತಲೆಬರಹದ ಸುಳ್ಳು ಸುದ್ದಿಯನ್ನು ಪತ್ರಿಕಾ ತುಣುಕಿನ ರೂಪದಲ್ಲಿ ಸಿದ್ಧಪಡಿಸಿ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕಾನೂನು ಪ್ರಕೋಷ್ಠವು ಒತ್ತಾಯಿಸಿದೆ.
ಈ ಕುರಿತು ರಾಜ್ಯ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೊಡಾಘಟ್ಟ ಅವರ ನೇತೃತ್ವದಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ. ದಿನಪತ್ರಿಕೆಯಲ್ಲಿ ಬಂದಿರುವ ಹಾಗೆ ಈ ಸುಳ್ಳು ಸುದ್ದಿಯನ್ನು (‘ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ: ಬಿ.ಎಲ್.ಸಂತೋಷ್’) ಎಂಬ ತಲೆಬರಹದಲ್ಲಿ ಒಂದು ವರದಿಯು ಬಂದಿರುವ ಹಾಗೆ ಸೃಷ್ಟಿಸಿದ್ದಾಗಿ ಗಮನ ಸೆಳೆಯಲಾಗಿದೆ.
ಈ ಸುಳ್ಳು ಸುದ್ದಿಯನ್ನು ವಿರೋಧ ಪಕ್ಷದ ಬೆಂಬಲಿಗರಾದ ಬೈರಪ್ಪ ಹರೀಶ್‍ಕುಮಾರ್, ದಿನೇಶ್ ಅಮೀನ್ ಮಟ್ಟು, ಹೇಮಂತ್ ಕುಮಾರ್, ದಿಲೀಪ್ ಗೌಡ ಹಾಗೂ ಬಿಂದು ಗೌಡ ಎಂಬಾತರು ತಮ್ಮ ಸೋಷಿಯಲ್ ಮೀಡಿಯಗಳಾದ ಫೇಸ್‍ಬುಕ್ ಮತ್ತು ಟ್ವಿಟರ್ ಪೇಜ್‍ಗಳಲ್ಲಿ ಅಪ್ ಲೋಡ್ ಮಾಡಿದ್ದರು; ಲಿಂಗಾಯತ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಸಲುವಾಗಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಅವರ ಬಗ್ಗೆ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದರು. ಸದರಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಯಿತು.
ಸಾಮಾಜಿಕ ಮಾಧ್ಯಮ ಸಂಚಾಲಕರಾದ ವಿಕಾಸ್ ಪುತ್ತೂರ್,ರಾಘವೇಂದ್ರ. ನಾಗೂರ, ಬೆಂಗಳೂರು ಕೇಂದ್ರ ಜಿಲ್ಲಾ ಸಂಚಾಲಕರಾದ ಯಶವಂತ್ ಎಂ, ಶಿವಕುಮಾರ್ ಯಾದವ್, ಶ್ರೇಯಸ್, ವೆಂಕಟಮುನಿ ಶೆಟ್ಟಿ, ಸುದರ್ಶನ್, ಹರ್ಷವರ್ಧನ್ ಇತರೆ ವಕೀಲರು ಉಪಸ್ಥಿತರಿದ್ದರು.