ಅಗತ್ಯಬಿದ್ದರೆ ಕಾವೇರಿಗೆ ಇನ್ನೊಂದು ಅಣೆಕಟ್ಟು ಕಟ್ಟಿಕೊಳ್ಳಲಿ ಎಂದು ಸುಪ್ರೀಂ ಕೋರ್ಟ್ ಗೆ ತಮಿಳುನಾಡು ಹೇಳಿದೆ: ಹೆಚ್.ಡಿ.ಕುಮಾರಸ್ವಾಮಿ
ಎರಡು ಹಂತಗಳಲ್ಲಿ ಯೋಜನೆ ಜಾರಿ, ದೇವೇಗೌಡರು ಸಲಹೆ ಮಾಡಿದ್ದಾರೆ
ನೆರೆ ರಾಜ್ಯದ ಒಪ್ಪಿಗೆ ಪಡೆಯಿರಿ ಎಂದು ಕೇಂದ್ರ ಸಚಿವರು ಹೇಳಿದ್ದು ಸರಿಯಲ್ಲ
ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಮಾಜಿ ಮುಖ್ಯಮಂತ್ರಿ
ಬೆಂಗಳೂರು:
ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಯೋಜನೆ ವಿಷಯದಲ್ಲಿ ಕರ್ನಾಟಕ ರಾಜ್ಯವು ತಮಿಳುನಾಡು ಜತೆ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ ಮತ್ತು ಅವರ ಒಪ್ಪಿಗೆಯೂ ಬೇಕಿಲ್ಲ.
ಹಾಗೆಯೇ, ಕೇಂದ್ರ ಸರಕಾರವು ಮಧ್ಯಸ್ಥಿಕೆ ವಹಿಸುವ ಅಗತ್ಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ವಿಧಾನಸಭೆಯಲ್ಲಿ ಇಂದು ಮುಂಗಡ ಪತ್ರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಗ್ಗೆ ವಿವರವಾಗಿ ತಮ್ಮ ವಾದ ಮಂಡಿಸಿದರು.
ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಬಗ್ಗೆ ಕಾನೂನು ಬದ್ಧವಾಗಿ ತಮಿಳುನಾಡು ಯಾವ ರೀತಿಯ ಆಕ್ಷೇಪ ಎತ್ತಲು ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಈ ಬಗ್ಗೆ ತಮಿಳುನಾಡು ಜತೆ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ಈ ದೇಶದ ಸುಪ್ರೀಂ ಕೋರ್ಟ್ ಹೇಳಿದೆ ಎಂಬ ಅಂಶವನ್ನು ಸದನದ ಗಮನಕ್ಕೆ ತಂದರು ಕುಮಾರಸ್ವಾಮಿ ಅವರು.
ಆಕ್ಷೇಪ ಇಲ್ಲ ಎಂದು ಸ್ವತಃ ತಮಿಳುನಾಡು ಹೇಳಿದೆ:
ಸುಪ್ರೀಂ ಕೋರ್ಟ್’ಗೆ ತಮಿಳುನಾಡು ರಾಜ್ಯದ ವಕೀಲರೇ ಪ್ರಮಾಣ ಪತ್ರವನ್ನು ಸಲ್ಲಿಸಿ, ಕಾವೇರಿ ನದಿಯಲ್ಲಿ ತನಗೆ ಹಂಚಿಕೆ ಆಗಿರುವ ನೀರನ್ನು ಕರ್ನಾಟಕ ಹೇಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ನಮ್ಮ ತಕರಾರು ಏನು ಇಲ್ಲ. ಅವರು ಬೇಕಾದರೆ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿಕೊಳ್ಳಲಿ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂಬ ಮಹತ್ವದ ಅಂಶದ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಸದನದ ಗಮನ ಸೆಳೆದರು.
ನಮಗೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ನೆರೆ ರಾಜ್ಯದ ಅಪ್ಪಣೆ ನಮಗೆ ಬೇಕಿಲ್ಲ. ಅಗತ್ಯವಾದರೆ ಮಧ್ಯಪ್ರವೇಶಿಸಿ ಸಂಧಾನ ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಜಲ ಸಂಪನ್ಮೂಲ ಖಾತೆ ಸಚಿವ ಗಜೇಂದ್ರ ಸಿಂಘ್ ಶೇಖಾವತ್ ಬೆಂಗಳೂರಿನಲ್ಲೇ ಕೊಟ್ಟಿರುವ ಹೇಳಿಕೆ ಒಪ್ಪತಕ್ಕದ್ದಲ್ಲ. ಆ ರೀತಿಯ ಯಾವ ಸಂಧಾನ ಅಥವಾ ಮಾತುಕತೆ ಬೇಕಾಗಿಲ್ಲ ಎಂದು ಸರಕಾರಕ್ಕೆ ಅವರು ನೇರವಾಗಿ ಹೇಳಿದರು.
ಕೇಂದ್ರ ಸಚಿವರು ನೀಡಿರುವ ಹೇಳಿಕೆ ನನಗೆ ಅಚ್ಚರಿ ಉಂಟು ಮಾಡಿದೆ. ಈ ಬಗ್ಗೆ ರಾಜ್ಯ ಸರಕಾರ ಆಕ್ಷೇಪ ದಾಖಲು ಮಾಡಬೇಕು. ರಾಜ್ಯದ ಹಿತಾಸಕ್ತಿಗಳ ಬಗ್ಗೆ ಸರಕಾರ ರಾಜಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದ ಅವರು, ವಸ್ತು ಸ್ಥಿತಿ ಹೀಗಿದ್ದರೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ಪತ್ರ ಬರೆದಿದ್ದರು. ಆದರೆ ನೆರೆ ರಾಜ್ಯದ ಜತೆ ಈ ರೀತಿಯ ಪತ್ರ ವ್ಯವಹಾರ ನಡೆಸುವ ಅಗತ್ಯವಿರಲಿಲ್ಲ ಎಂದರು ಕುಮಾರಸ್ವಾಮಿ ಅವರು.
ದೇವೇಗೌಡರು ಪರಿಹಾರ ಸೂಚಿಸಿದ್ದಾರೆ:
ಈಗ ಸರಕಾರ ಮಾಡಿಕೊಂಡಿರುವ ಗೊಂದಲದಿಂದ ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡುವುದು ಸುಲಭ ಸಾಧ್ಯವಲ್ಲ. ಈ ಬಗ್ಗೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುದೀರ್ಘ ಪತ್ರ ಬರೆದು ಯೋಜನೆಯನ್ನು ಯಾವ ರೀತಿ ಕಾರ್ಯಗತ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.
ಕುಡಿಯುವ ನೀರಿನ ಉದ್ದೇಶಕ್ಕೆ 30.65 ಟಿಎಂಸಿ ನೀರು ತುಂಬುವ 67.16 ಗ್ರಾಸ್ ಕೆಪಾಸಿಟಿಯಷ್ಟು ಗಾತ್ರದ ಈ ಯೋಜನೆಯನ್ನು ಒಂದೇ ಹಂತದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದರು. ಇದನ್ನು ಸರಕಾರ ಗಮನಕ್ಕೆ ತಂದುಕೊಳ್ಳಬೇಕು ಎನ್ನುವುದು ಈ ಒತ್ತಾಯ ಮಾಡಿದರು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇನ್ನು, ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿದಾಗ 9000 ಕೋಟಿ ರೂ. ಅಂದಾಜು ವೆಚ್ಚ ಆಗಿ, ಈಗ ಅದು 12000 ಕೋಟಿ ರೂ. ಗಳಿಗೆ ಹೋಗಿದೆ. ದಿನ ಕಳೆದಂತೆ ವೆಚ್ಚ ಇನ್ನೂ ಏರಿಕೆಯಾಗಿದೆ ಎಂದು ಅವರು ವಿವರಿಸಿದರು.
CWC ಯಾಕೆ ಬೇಕು?
ಕೇಂದ್ರ ಸರಕಾರ ತಮಿಳುನಾಡಿನ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದು ಪದೇ ಪದೆ ಯಾಕೆ ಹೇಳುತ್ತಿದ್ದಾರೆ? ದೆಹಲಿಗೆ ನಾವೂ ಕೂಡ ಬರಲು ಸಿದ್ದರಿದ್ದೇವೆ. ಆದರೆ ಎರಡೂ ರಾಜ್ಯದವರು ಕೂತು ನಾವು ಚರ್ಚೆ ಮಾಡೋದಾದರೆ ಕೇಂದ್ರ ಜಲ ಆಯೋಗ ( CWC ) ಯಾಕೆ ಬೇಕು? ಬೇರೆ ವ್ಯವಸ್ಥೆಗಳು ಯಾಕೆ ಬೇಕು. ಮೇಕೆದಾಟು ಯೋಜನೆಗೆ ಈಗ ಸಿಗಬೇಕಾದದ್ದು ಪರಿಸರಕ್ಕೆ ಸಂಬಂಧಿಸಿದ ಕ್ಲಿಯರೆನ್ಸ್ ಮಾತ್ರ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ಇಡಲಾಗಿದೆ. ನಮ್ಮಪಾದಯಾತ್ರೆಗೆ ಹೆದರಿ ಹಣ ಇಟ್ಟಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಹೇಳಲು ಶುರುವಾಗಿದ್ದಾರೆ. ಆದರೆ ತಮಿಳುನಾಡಿನಲ್ಲಿ ವಿವಿಧ ಪಕ್ಷಗಳು ಯೋಜನೆಯ ವಿರುದ್ಧ ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಸರಕಾರ ಹೆಚ್ಚಿನ ಶ್ರಮ ಹಾಕಿದರೆ ಮೇಕೆದಾಟು ಕೆಲಸ ಸರಾಗವಾಗಿ ನಡೆಯಲಿದೆ ಎಂದು ಹೆಚ್ ಡಿಕೆ ಹೇಳಿದರು.
ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ:
ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ತಾಳಿದ ನಿರ್ಲಕ್ಷ್ಯ ಧೋರಣೆಯನ್ನು ಕಟುವಾಗಿ ಟೀಕಿಸಿದರು.
75 ವರ್ಷದಲ್ಲಿ ಅನೇಕರು ಸರ್ಕಾರ ಮಾಡಿದ್ದಾರೆ, ಸುಮಾರು ಅಣೆಕಟ್ಟುಗಳು ಬಂದಿವೆ. ಈ ಬಗ್ಗೆ ಎಲ್ಲರೂ ಕ್ರೆಡಿಟ್ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದ ನೀರಾವರಿಗೆ ಯಾವುದೇ ಕೊಡುಗೆ ನೀಡಿದ ಕಾಂಗ್ರೆಸ್ ಈಗ ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ಈಗ ನೋಡಿದರೆ ಜನರ ಹಕ್ಕು ಅಂತಿದ್ದಾರೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನವರು ಪೊಲೀಸರನ್ನು ಬಿಟ್ಟು ಹೊಡೆಸುವಾಗ ನಮ್ಮ ನೀರು, ನಮ್ಮ ಹಕ್ಕು ನೆನಪಿಗೆ ಬರಲಿಲ್ಲವೇ? ಜನರು ಪೆಟ್ಟು ತಿಂದು ಊರು ಬಿಟ್ಟು ಹೋಗುವಾಗ ಅವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕೆ ಆಕ್ರೋಶ ವ್ಯಕ್ತಪಡಿಸಿದರು.