ಬೆಂಗಳೂರು: ರಾಜ್ಯ ಸರ್ಕಾರ 2.51 ಲಕ್ಷ ಭೂ ಮಂಜೂರುದಾರರ ಜಮೀನುಗಳ ಪೋಡಿ ಪ್ರಕ್ರಿಯೆಯನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲು ಮುಂದಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇದಕ್ಕಾಗಿ ಈಗಾಗಲೇ 73,390 ಸರ್ವೇ ನಂಬರುಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಂ.ಟಿ.ಬಿ. ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಳೆಯ ವಿಧಾನದಲ್ಲಿ ಭೂಮಿಯ ಪೋಡಿಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯಲ್ಲಿ ಕೆಲವರು ಇತರರ ಭೂಮಿ ದಾಖಲೆಗಳನ್ನು ಬಳಸಿ ವಂಚನೆ ಮಾಡುತ್ತಿದ್ದರೆಂದು ಹೇಳಿದರು. “ಈ ದುರುಪಯೋಗ ತಡೆಯಲು ಏಕವ್ಯಕ್ತಿ ಪೋಡಿ ವ್ಯವಸ್ಥೆಯನ್ನು ರದ್ದುಪಡಿಸಿ, ಸರ್ಕಾರವೇ ನೇರವಾಗಿ ಪೋಡಿ ಕಾರ್ಯ ನಡೆಸಲಿದೆ,” ಎಂದರು.
ಪೋಡಿ ಪ್ರಕ್ರಿಯೆಗೆ ಬೇಕಾಗಿದ್ದ ಐದು ದಾಖಲೆಗಳನ್ನು ಈಗ ಮೂರು ದಾಖಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಭೂ ದಾಖಲೆಗಳ ಮೂಲ ಕಡತಗಳನ್ನು ಸಂರಕ್ಷಿಸಲು ಡಿಜಿಟಲೀಕರಣ ಕಾರ್ಯಾಚರಣೆ ನಡೆಯುತ್ತಿದೆ. “ರಾಜ್ಯದ ಕಂದಾಯ ಕಚೇರಿಗಳಲ್ಲಿರುವ 100 ಕೋಟಿ ಪುಟಗಳಲ್ಲಿ 36 ಕೋಟಿ ಪುಟಗಳನ್ನು ಈಗಾಗಲೇ ಸ್ಕ್ಯಾನ್ ಮಾಡಲಾಗಿದೆ. ಮುಂದಿನ ಫೆಬ್ರವರಿಯೊಳಗೆ ಸಂಪೂರ್ಣ ಸ್ಕ್ಯಾನಿಂಗ್ ಕಾರ್ಯ ಮುಗಿಯಲಿದೆ,” ಎಂದು ಅವರು ತಿಳಿಸಿದರು.