ಬೆಂಗಳೂರು: ಫೆ.7ರಂದು ನಡೆದ ತೇಜಸ್ ವಿಮಾನ ಅಪಘಾತ ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ವಾಯುಪಡೆ (IAF) ತೇಜಸ್ ನ ಎಲ್ಲಾ ಸಿಂಗಲ್ ಸೀಟ್ ವಿಮಾನಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.
ಇತ್ತೀಚೆಗೆ ತೇಜಸ್ ವಿಮಾನದಲ್ಲಿ ಹೆಚ್ಚುತ್ತಿರುವ ಸರಣಿ ಅಪಘಾತಗಳ ಬೆನ್ನಲ್ಲೇ, ತೇಜಸ್ ವಿಮಾನವನ್ನು ವ್ಯಾಪಕವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲು ವಾಯುಪಡೆ ಮುಂದಾಗಿದ್ದು, ಇದರಿಂದಾಗಿ ಭಾರತೀಯ ವಾಯುಪಡೆಯಲ್ಲಿನ ಸುಮಾರು 30 ಸಿಂಗಲ್-ಸೀಟ್ ತೇಜಸ್ ಜೆಟ್ಗಳ ಸಂಪೂರ್ಣ ಫ್ಲೀಟ್ ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರ ತೇಜಸ್ ನ ಮೂರನೇ ವಿಮಾನ ಅಪಘಾತದ ಬಳಿಕ ಬಂದಿದ್ದು, ಸಾಕಷ್ಟು ಕಳವಳವನ್ನು ಹುಟ್ಟಿಸಿದೆ.
2024ರಲ್ಲಿ ಮೊದಲ ಬಾರಿಗೆ ತೇಜಸ್ ಜೆಟ್ ಜೈಸಲ್ಮೇರ್ ಪ್ರದೇಶದಲ್ಲಿ ಮೊದಲ ಅಪಘಾತ ಸಂಭವಿಸಿತ್ತು. ಫೈರ್ ಪವರ್ ಪ್ರದರ್ಶನದಿಂದ ಹಿಂತಿರುಗುತ್ತಿದ್ದಾಗ ವೇಳೆ ಜೈಸೆಲ್ಮೇರ್ ನಲ್ಲಿ ತೇಜಸ್ ಯುದ್ದವಿಮಾನ ಅಪಘಾತಕ್ಕೀಡಾಗಿದ್ದು, ಈ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದರು.
ಬಳಿಕ ಇತ್ತೀಚೆಗೆ ಕಳೆದ ವರ್ಷ 2025 ನವೆಂಬರ್ ತಿಂಗಳಿನಲ್ಲಿ ದುಬೈ ಏರ್ ಶೋನಲ್ಲಿ ನಡೆದ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ತೇಜಸ್ ವಿಮಾನ ಪತನಗೊಂಡಿದ್ದು, ಈ ದುರಂತದಲ್ಲಿ ಪೈಲೆಟ್ ಸಾವಿಗೀಡಾಗಿದ್ದರು.
ಇದಾದ ಬಳಿಕ ಮತ್ತೆ ಫೆ.7ರಂದು ಮತ್ತೊಂದು ಅಪಘಾತ ಸಂಭವಿಸಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ವಾಯುಪಡೆ ಸುರಕ್ಷತಾ ದೃಷ್ಟಿಯಿಂದ ತೇಜಸ್ ವಿಮಾನಗಳ ತಾಂತ್ರಿಕ ಸ್ಥಿರತೆ ಹಾಗೂ ಸಾಮರ್ಥ್ಯದ ಪರಿಶೀಲನೆಗೆ ಮುಂದಾಗಿದೆ.
ಈ ಕುರಿತು HAL ಸೆಬಿಗೆ ಸ್ಪಷ್ಟನೆ ನೀಡಿದ್ದು, ಅಪಘಾತದ ವರದಿಗಳನ್ನು ನಿರಾಕರಿಸಿದೆ. ಸಣ್ಣ ತಾಂತ್ರಿಕ ಸಮಸ್ಯೆ” ಹೊರತುಪಡಿಸಿ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.
ತೇಜಸ್ Mk1 ಇತರೆ ಯುದ್ಧ ವಿಮಾನಗಳ ಪೈಕಿ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ ಎಂದು ಸಂಸ್ಥೆ ಹೇಳಿದೆ.
