ಬೆಂಗಳೂರು:
1 ಸಾವಿರಕ್ಕೂ ಅಧಿಕ ಆಟೋ ಚಾಲಕರು ಇಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು ಜಯನಗರ ಮತ್ತು ಬೊಮ್ಮನಹಳ್ಳಿಯಲ್ಲಿ ಆಯೋಜನೆಗೊಳಿಸಿದ್ದ ಒಂದು ದಿನದ ಉಚಿತ ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಉಚಿತ ಕೋವಿಡ್ ಲಸಿಕೆ ಪಡೆದುಕೊಂಡಿರುತ್ತಾರೆ.
ಏಕಕಾಲಕ್ಕೆ ಎರಡೂ ಸ್ಥಳಗಳಲ್ಲಿ (ಜಯನಗರದ ಶಾಲಿನಿ ಗ್ರೌಂಡ್ಸ್ ಮತ್ತು ಬೊಮ್ಮನಹಳ್ಳಿಯ ಆರ್.ಎಂ.ಆರ್ ಪಾರ್ಕ್ನಲ್ಲಿ) ಆಯೋಜಿಸಲಾಗಿದ್ದ ಲಸಿಕಾ ಅಭಿಯಾನದಲ್ಲಿ, 100ಕ್ಕೂ ಅಧಿಕ ಡಂಜೋ, ಜೊಮ್ಯಾಟೋ, ಸ್ವಿಗ್ಗಿ ಕಾರ್ಯಕರ್ತರು, ಓಲಾ & ಉಬರ್ ನ ಟ್ಯಾಕ್ಸಿ ಡ್ರೈವರ್ ಗಳು ಕೋವಿಡ್ ಲಸಿಕೆ ಪಡೆದಿದ್ದು, ಈ ಕಾರ್ಯಕ್ಕೆ ಆಕ್ಷನ್ ಕೋವಿಡ್-19 ಟೀಮ್ (ಆಕ್ಟ್), Clinikk, ಯುನೈಟೆಡ್ ವೇ ಮತ್ತು ವರ್ಷನ್ 1 ಸಹಕಾರ ನೀಡಿದ್ದು ಶ್ಲಾಘನೀಯ.
ಅಭಿಯಾನದ ಕುರಿತು ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, ” ಆಟೋ ಚಾಲಕರು ನಮ್ಮ ಸಮಾಜದ ಅತ್ಯಂತ ಆದ್ಯತಾ ವರ್ಗವಾಗಿದ್ದು, ಗರ್ಭಿಣಿಯೊಬ್ಬರ ಆಸ್ಪತ್ರೆಯ ತುರ್ತು ಭೇಟಿ ಇರಬಹುದು, ಕುಟುಂಬ ವರ್ಗದವರೊಂದಿಗೆ ಎಂ.ಜಿ ರೋಡ್ ಗೆ ವಾರಾಂತ್ಯ ಕಳೆಯಲು ತೆರಳುವುದಿರಬಹುದು, ಶಾಲೆಯಿಂದ ಮನೆಗೆ ಬರುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವುದಿರಲಿ ಆಟೋ ಡ್ರೈವರ್ ಗಳು ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯನಿರ್ವಹಿಸುತ್ತಾರೆ.ಎಂತಹ ಸನ್ನಿವೇಶದಲ್ಲೂ ಮುಂಚೂಣಿ ಕಾರ್ಯನಿರ್ವಹಿಸುವ ಆಟೋ ಚಾಲಕರನ್ನು ಆದಷ್ಟು ಶೀಘ್ರ ಲಸಿಕೆಗೆ ಒಳಪಡಿಸುವುದು ನಮ್ಮ ಕರ್ತವ್ಯವಾದ್ದರಿಂದ ಈ ಉಚಿತ ಲಸಿಕಾ ಅಭಿಯಾನವನ್ನು ಆಯೋಜನೆಗೊಳಿಸಲಾಗಿದೆ” ಎಂದು ತಿಳಿಸಿದರು.
ಲಸಿಕಾ ಅಭಿಯಾನಕ್ಕೆ ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ಸಂಸದ ತೇಜಸ್ವೀ ಸೂರ್ಯ ಜಯನಗರದ ಶಾಲಿನಿ ಗ್ರೌಂಡ್ ನಲ್ಲಿ ಚಾಲನೆ ನೀಡಿದ್ದು, ಕೇವಲ 4-5 ಘಂಟೆಗಳಲ್ಲಿಯೇ 1ಸಾವಿರಕ್ಕೂ ಅಧಿಕ ಚಾಲಕರು ಕೋವಿಡ್ ಲಸಿಕೆ ಪಡೆದಿದ್ದು ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಡೆದ ದೇಶದ ಲಸಿಕಾ ಅಭಿಯಾನಗಳಲ್ಲೊಂದಾಗಿದೆ. 80ಕ್ಕೂ ಅಧಿಕ ಸ್ವಯಂಸೇವಕರು, ನರ್ಸ್ ಗಳು,ಡಾಕ್ಟರ್ ಗಳು, ಮೇಲ್ವಿಚಾರಕರ ಉಸ್ತುವಾರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಈ ಅಭಿಯಾನ ನಡೆದಿದ್ದು ವಿಶೇಷ. ಕೋವಿಡ್ ಲಸಿಕೆ ಪಡೆದುಕೊಂಡ ಎಲ್ಲ ಚಾಲಕರಿಗೂ ರೇಷನ್ ಕಿಟ್ ಹಾಗೂ Clinikk ವತಿಯಿಂದ 6 ತಿಂಗಳವರೆಗಿನ ಉಚಿತ ಹೆಲ್ತ್ ಕೇರ್ ಚಂದಾದರಿಕೆ ಕೂಡ ಇದೇ ಸಂದರ್ಭದಲ್ಲಿ ಒದಗಿಸಲಾಗಿದೆ.
ಇದರೊಂದಿಗೆ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು, ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ನೇರವಾಗಿ ಕೋವಿಡ್ ಸೋಂಕಿತರ/ಕೋವಿಡ್ ಚಿಕಿತ್ಸೆ ಪಡೆದು ಮನೆಯಲ್ಲಿರುವ ರೋಗಿಗಳ ಮನೆಬಾಗಿಲಿಗೆ ತಲುಪಿಸುವ ‘ಎಂಪಿ ಆಕ್ಸಿಬ್ಯಾಂಕ್’ ಅನ್ನು ಸ್ಥಾಪಿಸಿದ್ದು, ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನ ನಡೆಸಿದ ಏಕೈಕ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ‘ಎಂಪಿ ಆಕ್ಸಿಬ್ಯಾಂಕ್’ ನಲ್ಲಿ 512 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳಿದ್ದು, 85 ರಿಂದ 92 ವರೆಗಿನ ಆಮ್ಲಜನಕ ಪ್ರಮಾಣ ಹೊಂದಿರುವ ಕೋವಿಡ್ ಸೋಂಕಿತರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದ್ದು, ಸಹಾಯವಾಣಿ ಸಂಖ್ಯೆ 080 6191 4960 ಗೆ ಕರೆ ಮಾಡುವ ಮೂಲಕ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.
Free Mega Vaccination to 1000+ Auto Rickshaw Drivers of Bengaluru South on #SevaDiwas at Jayanagar and Bommanahalli https://t.co/Ds0r4aueAD
— Tejasvi Surya (@Tejasvi_Surya) May 30, 2021
ಕಳೆದ 10 ದಿನಗಳಲ್ಲಿ 500ಕ್ಕೂ ಅಧಿಕ ನಾಗರಿಕರು ಈ ಸೇವೆಯನ್ನು ಪಡೆದಿರುತ್ತಾರೆ.ಇದರೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ರೊಂದಿಗೆ ಸಂಸದರು,ಕುಮಾರಸ್ವಾಮಿ ಲೇ ಔಟ್ ನಲ್ಲಿ ಟ್ರಯಾಜಿಂಗ್ ಸೆಂಟರ್ ಗೆ ಚಾಲನೆ ನೀಡಿದ್ದು, ಕೋವಿಡ್ ಗುಣಲಕ್ಷಣಗಳನ್ನು ಹೊಂದಿರುವವರು ಆಸ್ಪತ್ರೆ ಬೆಡ್ ಸಿಗುವ ತನಕವೂ ತುರ್ತು ಚಿಕಿತ್ಸೆಗೆ ಇಂತಹ ಟ್ರಯಾಜಿಂಗ್ ಸೆಂಟರ್ ಗಳಲ್ಲ, ಚಿಕಿತ್ಸೆ ಪಡೆಯಬಹುದು ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು.