ಬೆಂಗಳೂರು:
ನನ್ನ ಸಹೋದರಿ ತೇಜಸ್ವಿನಿ ಧೈರ್ಯ ಮಾಡಿ ರಾಜಕೀಯದಲ್ಲಿ ಮುನ್ನುಗ್ಗಬೇಕು. ಅನಂತಕುಮಾರ್ ಅವರ ಜೊತೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು ಎಂದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಆಹ್ವಾನಿಸಿದರು.
ಅನಂತ ನಮನ 64 ಕಾರ್ಯಕ್ರಮಕ್ಕೂ ಮೊದಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಗವಿಪುರಂ ಗುಟ್ಟಹಳ್ಳಿಯ ಅದಮ್ಯ ಚೇತನ ಫೌಂಡೇಶನ್ ನ ಅಡುಗೆ ಮನೆಗೆ ಭೇಟಿ ನೀಡಿ ವೀಕ್ಷಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ತೇಜಸ್ವಿನಿ ಅನಂತಕುಮಾರ್ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು:” ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ ಬಸವ ಆಗಲು ಸಾಧ್ಯವಿಲ್ಲ. ನೀವು ಇಲ್ಲೇ ಅಡುಗೆ ಮನೆಯಲ್ಲಿ ಅದಮ್ಯ ಚೇತನದ ಜೊತೆಯಲ್ಲೇ ಇರಬೇಕಾಗುತ್ತದೆ. ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ಮುನ್ನುಗ್ಗಿ, ನಿಮ್ಮನ್ನು ನಂಬಿಕೊಂಡಿರುವ ಹಿಂಬಾಲಕರನ್ನು ರಕ್ಷಣೆ ಮಾಡಿ. ತೇಜಸ್ವಿನಿ ಅವರೇ ನೀವು ಮುನ್ನುಗ್ಗಬೇಕು. ಹೊಲವನ್ನ ಉಳುವೆ ಮಾಡದಿದ್ದರೆ ಮಟ್ಟ ಆಗುವುದಿಲ್ಲ, ಶಿಲೆ ಶಿಲ್ಪಿ ಕೈಗೆ ಸಿಗದಿದ್ದರೆ ಕಲೆ ಅರಳುವುದಿಲ್ಲ, ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಕಾರಣಕ್ಕೆ ನೀವು ರಾಜಕಾರಣದಲ್ಲಿ ಇರಬೇಕು ಎಂದು ಸಲಹೆ ನೀಡುತ್ತೇನೆ,” ಎಂದು ಹೇಳಿದರು.
ನಿಮ್ಮ ಇತಿಹಾಸವನ್ನು ಯಾರೂ ಬದಲಾವಣೆ ಮಾಡಲು, ಮುಚ್ಚಿಹಾಕಲು ಆಗುವುದಿಲ್ಲ. ಒಳ್ಳೆ ಕೆಲಸ ಮಾಡಿ ನಿಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದೀರಿ. ನಿಮ್ಮ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಬಳಿ ಮೃದು ಹೃದಯವಿದೆ. ಅನಂತಕುಮಾರ್ ಅವರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ, ನೀವು ಹೆಜ್ಜೆ ಗುರುತು ಮೂಡಿಸಿ ಎಂದು ಹೇಳಿದರು.