
ಬೆಂಗಳೂರು: ದೇವಸ್ಥಾನಗಳ ಸೇವಾ ಶುಲ್ಕವನ್ನು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬ ಬಿಜೆಪಿಯ ಆರೋಪಗಳನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತೀವ್ರವಾಗಿ ತಳ್ಳಿಹಾಕಿದ್ದಾರೆ. 1997ರಲ್ಲಿ ತದಕಾಲೀನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರು ತಂದಿದ್ದ ಧಾರ್ಮಿಕ ದತ್ತಿ ಕಾಯ್ದೆ 2003ರಿಂದ ಜಾರಿಯಲ್ಲಿದ್ದು, ಯಾವುದೇ ದೇವಸ್ಥಾನದ ಹಣವನ್ನು ಇನ್ನೊಂದು ದೇವಸ್ಥಾನಕ್ಕೆ ಅಥವಾ ಸರ್ಕಾರದ ಖಜಾನೆಗೆ ವರ್ಗಾಯಿಸಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುವುದರ ಹೊರತು ಬೇರೆ ಕೆಲಸವಿಲ್ಲ. ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, 2003ರಿಂದ ಇಂದಿನವರೆಗೂ ಯಾವುದೇ ದೇವಸ್ಥಾನದ ಒಂದು ರೂಪಾಯಿ ಹಣವೂ ಸರ್ಕಾರದ ಖಜಾನೆಗೆ ಬಂದಿಲ್ಲ. 2008ರಿಂದ 2013ರವರೆಗೂ ಹಾಗೂ 2019ರಿಂದ 2023ರವರೆಗೂ ಬಿಜೆಪಿ ಅಧಿಕಾರದಲ್ಲಿದ್ದರೂ ಇದೇ ಕಾನೂನು ಜಾರಿಯಲ್ಲಿತ್ತು,” ಎಂದು ಸಚಿವರು ಮಾಧ್ಯಮಕ್ಕೆ ಹೇಳಿದರು.
ದೇವಸ್ಥಾನಗಳ ವರ್ಗೀಕರಣ
ರಾಜ್ಯದಲ್ಲಿ 205 ಎ ಗ್ರೇಡ್ ದೇವಸ್ಥಾನಗಳು (₹25 ಲಕ್ಷಕ್ಕಿಂತ ಹೆಚ್ಚು ಆದಾಯ), 193 ಬಿ ಗ್ರೇಡ್ ದೇವಸ್ಥಾನಗಳು (₹5 ಲಕ್ಷ–₹25 ಲಕ್ಷ ಆದಾಯ) ಸೇರಿ ಒಟ್ಟು 398 ದೇವಸ್ಥಾನಗಳು ಇವೆ. ಪ್ರತಿಯೊಂದು ದೇವಸ್ಥಾನಕ್ಕೂ ಅಧ್ಯಕ್ಷರು, ಎಂಟು ಸದಸ್ಯರು ಮತ್ತು ಅರ್ಚಕರು ಸೇರಿ ಆಡಳಿತ ಸಮಿತಿ ಇರುತ್ತದೆ.
“ಕಟೀಲ್ ದೇವಸ್ಥಾನ ಸಂಪೂರ್ಣವಾಗಿ ಸ್ಥಳೀಯ ಆಡಳಿತ ಮಂಡಳಿಯವರಿಂದಲೇ ನಿರ್ವಹಣೆಯಾಗುತ್ತದೆ. ಸರ್ಕಾರ ಅಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಸೇವಾ ಶುಲ್ಕದ ಪರಿಷ್ಕರಣೆಗಳನ್ನು ಬಜೆಪಿಯವರೇ ತಮ್ಮ ಆಡಳಿತಾವಧಿಯಲ್ಲಿ ಹಲವೆಡೆ ಮಾಡಿದ್ದಾರೆ. 2019 ರಿಂದ 2023ರವರೆಗೆ ಅವರೇ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಣೆ ಮಾಡಿದ್ದಾರೆ,” ಎಂದು ರೆಡ್ಡಿ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉದಾಹರಣೆ
“2010ರಲ್ಲಿ ಬಜೆಪಿ ಆಡಳಿತಾವಧಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸೇವಾ ಶುಲ್ಕ ಪರಿಷ್ಕರಣೆ ನಡೆದಿದೆ. ಈಗ 2025ರಲ್ಲಿ ಆಡಳಿತ ಮಂಡಳಿ 15 ವರ್ಷಗಳ ನಂತರ ತೆಂಗಿನಕಾಯಿ, ಹೂವು, ಕರ್ಪೂರ ಮುಂತಾದ ವಸ್ತುಗಳ ಬೆಲೆ ಏರಿಕೆ ಉಲ್ಲೇಖಿಸಿ ಸೇವಾ ಪರಿಷ್ಕರಣೆ ಬೇಡಿಕೆ ಇಟ್ಟಿತ್ತು. ಆ ಬೇಡಿಕೆಯನ್ನು ನಮ್ಮ ಆಯುಕ್ತರು ನಿಯಮಾನುಸಾರ ಒಪ್ಪಿದ್ದಾರೆ,” ಎಂದು ಸಚಿವರು ವಿವರಿಸಿದರು.
ಆರ್ಟಿಐ ಸವಾಲು
“ಬಿಜೆಪಿಯವರಿಗೆ ನಿಜವಾಗಿಯೂ ಸರ್ಕಾರ ದೇವಸ್ಥಾನ ಹಣವನ್ನು ದುರುಪಯೋಗಪಡಿಸುತ್ತಿದೆ ಅನ್ನೋ ಶಂಕೆ ಇದ್ದರೆ ಆರ್ಟಿಐ ಹಾಕಿ ಸತ್ಯಾಂಶಗಳನ್ನು ನೋಡಬಹುದು. 2003ರಿಂದ ಇಂದಿನವರೆಗೆ ಸರ್ಕಾರದ ಖಜಾನೆಗೆ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇವಲ ಜನರನ್ನು ತಪ್ಪು ದಾರಿಯಲ್ಲಿ ನಡೆಸುವ ಸುಳ್ಳು ಪ್ರಚಾರ,” ಎಂದು ಸಚಿವರು ಕಟುವಾಗಿ ಟೀಕಿಸಿದರು.
ರಾಮಲಿಂಗಾ ರೆಡ್ಡಿ ಅವರು ಕಾಂಗ್ರೆಸ್ ಸರ್ಕಾರ ದೇವಸ್ಥಾನಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸ್ವಾಯತ್ತತೆಗೆ ಬದ್ಧವಾಗಿದೆ ಎಂದೂ, ಬಿಜೆಪಿ ದೇವಾಲಯಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸಿದರು.