ಟೆಂಡರ್ ಕರೆಯುವ ಮುನ್ನ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ
ಬೆಂಗಳೂರು: “ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಎರಡು ಹಂತದ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಮೊದಲ ಹಂತದ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಳೆ ಹಾನಿ, ಬೆಂಗಳೂರು ಪ್ರಗತಿ ಹಾಗೂ ಗ್ರೇಟರ್ ಬೆಂಗಳೂರು ಅಧಿನಿಯಮ ಅನುಷ್ಠಾನ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಶಾಸಕರು ಹಾಗೂ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು.
“ಬೆಂಗಳೂರಿನ ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು, ಪೊಲೀಸ್ ಇಲಾಖೆಯ ಡಿಜಿಪಿ, ಐಜಿಪಿ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ” ಎಂದು ಮಾಹಿತಿ ನೀಡಿದರು.
“ವಿಧಾನಸೌಧದ ಒಂದು ಕಿ.ಮೀ ಸುತ್ತಮುತ್ತ ಎಲ್ಲೂ ನಿರ್ಗಮನಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಇಲ್ಲಿ ಟ್ರಾಫಿಕ್ ಜಾಮ್ ಆದರೆ ಎಲ್ಲಾಕಡೆ ಆಗುತ್ತದೆ. ಹೀಗಾಗಿ ಇದನ್ನು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಬಿಎ ಮುಖ್ಯ ಆಡಳಿತಾಧಿಕಾರಿಗಳು ಈ ಸಭೆ ಮಾಡಿದ್ದೇವೆ” ಎಂದು ಹೇಳಿದರು.
“ಇನ್ನು ಬೆಂಗಳೂರಿನಲ್ಲಿ 114 ಕಿ.ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು, ಈ ಯೋಜನೆ ಸಂಬಂಧ ಸಂಚಾರ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗಿದೆ” ಎಂದರು.
ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ, ಶಾಸಕರಾದ ಎನ್ ಎ ಹ್ಯಾರೀಸ್, ರಿಜ್ವಾನ್ ಅರ್ಷದ್, ಗೋಪಾಲಯ್ಯ, ಸತೀಶ್ ರೆಡ್ಡಿ, ಮುನಿರಾಜು, ಎಸ್ ಟಿ ಸೋಮಶೇಖರ್, ಉದಯ್ ಗರುಡಾಚಾರ್, ರಾಮಮೂರ್ತಿ, ಮಂಜುಳಾ ಲಿಂಬಾವಳಿ, ಶ್ರೀನಿವಾಸ್, ರವಿ ಸುಬ್ರಮಣ್ಯ, ಆನೇಕಲ್ ಶಿವಣ್ಣ, ಎಂಎಲ್ಸಿ ಸುಧಾಮದಾಸ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ ರಾವ್, ಬಿ ಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಬಿಡಿಎ ಆಯುಕ್ತ ಜಯರಾಮ್, ಬಿಎಂಆರ್ಡಿಎ ಆಯುಕ್ತ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.