ಬೆಂಗಳೂರು: ನಗರದ ಇಂದಿರಾನಗರದ ಜನಸಂದಣಿ ಹೆಚ್ಚಿರುವ 100 ಫೀಟ್ ರಸ್ತೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮದ್ಯದ ನಶೆಯಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕನೊಬ್ಬ ನಿಯಂತ್ರಣ ತಪ್ಪಿ, ಡಿವೈಡರ್ ದಾಟಿ ಜನಪ್ರಿಯ ರೆಸ್ಟೋರೆಂಟ್ಗೆ ಕಾರು ಡಿಕ್ಕಿ ಹೊಡೆದಿದ್ದಾನೆ.
ರಾತ್ರಿ 11.35ರ ಸುಮಾರಿಗೆ, 18ನೇ ಮೇನ್ ರಸ್ತೆಯಿಂದ 100 ಫೀಟ್ ರಸ್ತೆಯತ್ತ ವೇಗವಾಗಿ ಬಂದ ಸ್ಕೋಡಾ ಕಾರು, ನಿಗದಿತ ಎಡ ತಿರುವನ್ನು ತೆಗೆದುಕೊಳ್ಳಲು ವಿಫಲವಾಗಿದೆ. ಅತಿವೇಗ ಮತ್ತು ಮದ್ಯದ ನಶೆಯಿಂದ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ, ಕಾರು ಮಧ್ಯದ ಡಿವೈಡರ್ ಮೇಲೆ ಹಾರಿ, ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನೇರವಾಗಿ ರೆಸ್ಟೋರೆಂಟ್ ಗೋಡೆಗೆ ಢಿಕ್ಕಿ ಹೊಡೆದಿದೆ.

ಅಪಘಾತದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಕಾರು ಪಾದಚಾರಿಗಳನ್ನು ಕೇವಲ ಅಂಗುಲಾಂತರದಲ್ಲಿ ತಪ್ಪಿಸಿಕೊಂಡಿರುವುದು ಕಂಡುಬಂದಿದೆ. ಅಪಘಾತದ ಸಮಯದಲ್ಲಿ ರಸ್ತೆಯ ಪಕ್ಕದಲ್ಲೇ ನಿಂತಿದ್ದ ಹಲವರು ಜೀವ ಉಳಿಸಿಕೊಂಡು ಓಡಿ ತಪ್ಪಿಸಿಕೊಂಡಿದ್ದಾರೆ.
ಅಪಘಾತದ ತೀವ್ರತೆಯನ್ನು ಗಮನಿಸಿದರೆ, ಯಾರಾದರೂ ಕಾರಿನ ವ್ಯಾಪ್ತಿಗೆ ಬಂದಿದ್ದರೆ ಪ್ರಾಣಾಪಾಯ ಸಂಭವಿಸಬಹುದಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Drunk Driver Crashes Into Indiranagar Restaurant, Pedestrians Escape Narrowly,Car seized.
— Yasir Mushtaq (@path2shah) January 10, 2026
Bengaluru
A major accident was narrowly averted late Thursday night on #Indiranagar’s bustling 100 Feet Road when a drunk driver lost control of his car, jumped a divider, and rammed… pic.twitter.com/sA8mMj0Ikb
ಬೆಂಗಳೂರು ಸಂಚಾರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಾರು ಚಾಲನೆ ಮಾಡುತ್ತಿದ್ದ 42 ವರ್ಷದ ಡೆರಿಕ್ ಮದ್ಯದ ಅಮಲಿನಲ್ಲಿ ಇದ್ದುದು ದೃಢಪಟ್ಟಿದೆ. ಘಟನೆ ಸಂಬಂಧ ಕಾರನ್ನು ವಶಕ್ಕೆ ಪಡೆದು, ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಪ್ರಕರಣ ದಾಖಲಿಸಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು, ಕಾನೂನು ನೋಟಿಸ್ ಜಾರಿ ಮಾಡಲಾಗಿದೆ.
ಇಂದಿರಾನಗರದಂತಹ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದು ಸಾರ್ವಜನಿಕರ ಜೀವಕ್ಕೆ ಭಾರೀ ಅಪಾಯಕಾರಿಯಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
