ಕುಂದಾಪುರ/ಉಡುಪಿ:
ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ವಾರ್ಪ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಲಂಗಾರು ಹಾಕಿದ್ದ ಒಂಬತ್ತಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು, ದೋಣಿ, ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಇದರಿಂದ ಸುಮಾರು 10 ಕೋಟಿ ರೂ.ಗೂ ಅಧಿಕ ಮೊತ್ತ ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.
ಮಳೆಗಾಲಕ್ಕೂ ಮೊದಲು ಲಂಗಾರು ಹಾಕಿದ ಬೋಟೊಂದರಲ್ಲಿ ಇಂದು ಬೆಳಗ್ಗೆ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತೆನ್ನ ಲಾಗಿದೆ. ಬೆಂಕಿಯ ಕೆನ್ನಾಲಿಗೆ ಒಂದಕ್ಕೊಂದು ತಾಗಿಸಿಕೊಂಡು ನಿಲ್ಲಿಸಲಾದ ಬೋಟುಗಳಿಗೆ ವಿಸ್ತರಿಸಿಕೊಂಡು ಹೋಯಿತು. ಇದರಿಂದ ಹಲವು ಬೋಟುಗಳು ಬೆಂಕಿಗೆ ಆಹುತಿಯಾದವು.
ಬೆಂಕಿ ಅವಘಡದಿಂದ ಸುಟ್ಟ 9 ಬೋಟುಗಳಲ್ಲಿ ಪರ್ಶೀನ್, 370 ಮೊದಲಾದ ದುಬಾರಿ ಬೋಟುಗಳಿದ್ದು ಉಳಿದಂತೆ ಸಣ್ಣ ದೋಣಿಗಳು, ಬಲೆಗಳು, ವಾರ್ಪ್ ಪ್ರದೇಶದಲ್ಲಿದ ಶೆಡ್‌ನಲ್ಲಿ ಇರಿಸಿದ್ದ ಮೂರಕ್ಕು ಅಧಿಕ ಬೈಕುಗಳ ಸಹಿತ ವಿವಿಧ ಪರಿಕರ ಗಳು ಸುಟ್ಟು ಹೋಗಿವೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಶ್ರೀಗುರು, ಮೂಕಾಂಬಿಕಾ, ಪ್ರಿಯದರ್ಶಿನಿ, ಯಕ್ಷೇಶ್ವರಿ, ಶ್ರೀಮಂಜುನಾಥ, ಸೀ ಫರ್ಲ್, ಮಧುಶ್ರೀ, ಗುರುಪ್ರಸಾದ್, ಜಲರಾಣಿ ಹೆಸರಿನ ಬೋಟುಗಳು ಅಗ್ನಿಗಾಹುತಿಯಾಗಿವೆ. ಅಣ್ಣಪ್ಪ ಸ್ವಾಮಿ ಹೆಸರಿನ ದೋಣಿಗೆ ಸಂಬಂಧಿಸಿದ 50 ಲಕ್ಷ ಮೌಲ್ಯದ ಬಲೆ ಸೆಟ್ ಹಾಗೂ ಒಂದಷ್ಟು ಸಣ್ಣ ದೋಣಿಗಳು ಹಾನಿಗೀಡಾಗಿವೆ ಎಂದು ತಿಳಿದು ಬಂದಿದೆ. ಈ ದುರಂತದಿಂದ ಮೇಲ್ನೋಟಕ್ಕೆ 10ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಈ ಮಧ್ಯೆ ಸ್ಥಳೀಯರೇ ಸೇರಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.
ಬಳಿಕ ಬೆಳಗ್ಗೆ 10.30ರ ಸುಮಾರಿಗೆ ಕುಂದಾಪುರ, ಬೈಂದೂರು, ಉಡುಪಿ ಯಿಂದ ಅಗ್ನಿಶಾಮಕ ದಳದ ಮೂರು ವಾಹನ ಗಳು ಆಗವಿಮಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿತು. ಬೆಂಕಿ ಭೀಕರವಾಗಿ ಹರಡುತ್ತಿದ್ದ ಪರಿಣಾಮ ಅಗ್ನಿ ಶಾಮಕದಳ ವಾಹನಗಳಲ್ಲಿದ್ದ ನೀರು ಸಾಕಾಗದೆ, 4 ಪಂಪ್ ಸೆಟ್‌ಗಳ ಮೂಲಕ ನದಿಯಿಂದ ನೀರು ಬಿಟ್ಟು ನಂದಿಸುವ ಕಾರ್ಯ ಮಾಡ ಲಾಯಿತು. ಇಲ್ಲದಿದ್ದರೆ ಇಡೀ ಪ್ರದೇಶವೇ ಸುಟ್ಟು ಬೂದಿಯಾಗುವ ಸಂಭವವಿತ್ತು ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.




ಮೀನುಗಾರರು, ಸಾರ್ವಜನಿಕರು, ಪೊಲೀಸರು ಖಾಸಗಿ ವಾಹನಗಳಲ್ಲಿ ಟ್ಯಾಂಕ್ ಮೂಲಕ ನೀರು ಬಳಸಿ ಅಗ್ನಿ ಹತೋಟಿಗೆ ತರಲು ಹರಸಾಹಸ ಪಟ್ಟರು. ಇದರಲ್ಲಿ ಸರ್ವಧರ್ಮಿಯರು ಕೈಜೋಡಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂತು. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಲೆ ಸಾವಿರಾರು ಮಂದಿ ಘಟನಾ ಸ್ಥಳಕ್ಕೆ ಆಗಮಿಸಿ ದರು. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಮ್ಯಾಂಗನೀಸ್ ರಸ್ತೆ ಪ್ರವೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗಿತ್ತು.
ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಮೀನುಗಾರರಿರೊಂದಿಗೆ ಚರ್ಚೆ ನಡೆಸಿ ದುರಂತದ ಕುರಿತು ಮಾಹಿತಿ ಪಡೆದು ಕೊಂಡರು.
ಅದೇ ರೀತಿ ಕುಂದಾಪುರ ಉಪವಿಭಾಗಾಧಿಕಾರಿ ರಶ್ಷ್ಮೀ ಎಸ್.ಆರ್., ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸವಿತ್ರತೇಜ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಠಾಣಾ ಪೊಲೀಸರು, ಕರಾವಳಿ ಕಾವಲು ಪಡೆ, ಕಂದಾಯ, ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.