ಬೆಂಗಳೂರು:
ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ನೋಡಲು ಪೂರಕ ಕೇಂದ್ರ ಬಜೆಟ್ ಮಂಡಿಸಲಾಗಿದೆ. ಸ್ವಾತಂತ್ರ್ಯೋತ್ತರ ಅಮೃತ ಕಾಲಘಟ್ಟಕ್ಕೆ ನಾವು ಕಾಲಿಟ್ಟಿದ್ದೇವೆ. ವಿಶ್ವದ ಪ್ರಮುಖ ಹಣಕಾಸು ವ್ಯವಸ್ಥೆ ಹೊಂದಿದ 3 ದೇಶಗಳÀಲ್ಲಿ ಒಂದಾಗಿ ಭಾರತವು ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಚಿವ ಪಿಯೂಷ್ ಗೋಯಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಉದ್ಯೋಗ, ಗರಿಷ್ಠ ಆರ್ಥಿಕ ಚಟುವಟಿಕೆ, ಸಮಾಜದ ಎಲ್ಲ ಕ್ಷೇತ್ರಕ್ಕೂ ಸಹಾಯಕ. ಉತ್ತಮ ಭವಿಷ್ಯ, ಸುಸ್ಥಿರ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. 9 ವರ್ಷಗಳಲ್ಲಿ ಮೋದಿಜಿ ಅವರು ಸಂಪನ್ಮೂಲದ ಸಮರ್ಪಕ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ. ಮನೆಗಳ ನಿರ್ಮಾಣ, ಎಲ್ಲರಿಗೂ ವಿದ್ಯುತ್, ಗ್ಯಾಸ್ ಸಿಲಿಂಡರ್ ಸಂಪರ್ಕ, ಡಿಜಿಟಲ್ ಕನೆಕ್ಟಿವಿಟಿಯಿಂದ ಗಮನಾರ್ಹ ಬದಲಾವಣೆ ಆಗಿದೆ. ಅಲ್ಲದೆ ಈಗ ಮನೆಮನೆಗೆ ನಳ್ಳಿನೀರು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದ ಐಟಿ ಕ್ಷೇತ್ರದ ಕೊಡುಗೆ ಶ್ಲಾಘನೀಯ ಎಂದ ಅವರು, ಉತ್ತಮ ಗುಣಮಟ್ಟದ ಜೀವನ ನಿರೀಕ್ಷೆಯು ಮುಂದೆ ಈಡೇರಲಿದೆ ಎಂದರು. ವೈಯಕ್ತಿಕ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಿದ್ದು ಮಧ್ಯಮ ವರ್ಗಕ್ಕೆ ಮಹತ್ವದ ಕೊಡುಗೆ ಎಂದು ಮೆಚ್ಚುಗೆ ಸೂಚಿಸಿದರು.
ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆಗೆ ಕರ್ನಾಟಕದ ಕೊಡುಗೆ ದೊಡ್ಡದು. ರೈಲ್ವೆ ಮೂಲಕ ಕರ್ನಾಟಕಕ್ಕೆ 7,561 ಕೋಟಿ ಅನುದಾನ ಸಿಗುತ್ತಿದೆ. ಬೆಂಗಳೂರು ಸಬರ್ಬನ್ ರೈಲು ವ್ಯವಸ್ಥೆಗೆ ಹೆಚ್ಚಿನ ಹಣ ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಸಿಗಲಿದ್ದು, ನೆನೆಗುದಿಗೆ ಬಿದ್ದಿದ್ದ ಯೋಜನೆ ಜಾರಿಗೆ ನೆರವಾಗಲಿದೆ ಎಂದು ವಿವರಿಸಿದರು.
ಮೈಸೂರು- ಬೆಂಗಳೂರು ಹೈಸ್ಪೀಡ್ ಹೈವೇ ಮೂಲಕ ಒಂದೂವರೆ ಗಂಟೆಗೂ ಕಡಿಮೆ ಅವಧಿಯಲ್ಲಿ ತಲುಪುವ ಅವಕಾಶವಾಗಲಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಕೈಗಾರಿಕೀಕರಣಕ್ಕೆ ನೆರವಾಗಲಿದ್ದು, ಐಟಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2047ರ ವೇಳೆಗೆ ಭಾರತವು ವಸಾಹತುಶಾಹಿ ವ್ಯವಸ್ಥೆಯ ಚಿಂತನೆಯಿಂದ ಸಂಪೂರ್ಣ ಹೊರಬಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಆಗಲಿದೆ. ಹಣಕಾಸು ಸಚಿವರು ಕರ್ನಾಟಕವನ್ನು ಪ್ರತಿನಿಧಿಸುವವರು. ಅವರು ಸುಸ್ಥಿರ ಪ್ರಗತಿ, ಹೊಸ ಕೆಲಸಗಳ ಅವಕಾಶ, ಯುವಕರಿಗೆ ಕೌಶಲಗಳ ಅಭಿವೃದ್ಧಿಗೆ ಒತ್ತು ಕೊಡುವ ಬಜೆಟ್ ಮುಂದಿಟ್ಟಿದ್ದಾರೆ. ಕರಕುಶಲಕರ್ಮಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಕ್ಕೆ ಭವಿಷ್ಯದಲ್ಲಿ ಅವಕಾಶ ಸಿಗಲಿದೆ ಎಂದು ತಿಳಿಸಿದರು. ಹೆಚ್ಚು ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ವೃದ್ಧಿಯಿಂದ ಹೆಚ್ಚು ಉದ್ಯೋಗ ಲಭಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನ ಸಿಗುತ್ತದೆ. ವ್ಯವಹಾರ ಸರಳೀಕರಣ, ಡಿಜಿಲಾಕರ್, ಇಲೆಕ್ಟ್ರಾನಿಕ್ ಫೋಕಸ್ ಮೂಲಕ ಕ್ರಾಂತಿಕಾರಿ ಪ್ರಗತಿ ಖಚಿತ. ಇದು ಯುವಶಕ್ತಿಗೆ ಪ್ರೋತ್ಸಾಹಕ ಎಂದರು.
People of Karnataka want a double-engine Govt. led by PM @NarendraModi ji & his team.
— Piyush Goyal (@PiyushGoyal) February 4, 2023
At the media meet in Bengaluru on #AmritKaalBudget, highlighted how the state will drive India's rapid transformation into a developed nation.
📹 https://t.co/xy7fKCkh4Y pic.twitter.com/K1CvdASWP2
ವಿಶ್ವದ 10ನೇ ದೊಡ್ಡ ಆರ್ಥಿಕ ಶಕ್ತಿಯಿಂದ ಈಗಾಗಲೇ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತವು ಹೊರಹೊಮ್ಮಿದೆ. ಅದು ಕೆಲವೇ ವರ್ಷಗಳಲ್ಲಿ 3ನೇ ಬೃಹತ್ ಆರ್ಥಿಕ ಶಕ್ತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಜನರು ಮೋದಿಜಿ ಮತ್ತು ಬಿಜೆಪಿ ಜೊತೆಗಿದ್ದಾರೆ. ರಾಜ್ಯದ ಜನರು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷವು ಸುಳ್ಳು ಆಶ್ವಾಸನೆಗಳನ್ನಷ್ಟೇ ನೀಡುತ್ತದೆ. ಅದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಗುಜರಾತ್ ರಾಜ್ಯದಲ್ಲೂ ಇದು ಫಲಿತಾಂಶದ ವೇಳೆ ವ್ಯಕ್ತವಾಗಿದೆ. ಗರಿಷ್ಠ ಬಹುಮತದೊಂದಿಗೆ ನಾವು ಗೆದ್ದಿದ್ದೇವೆ. ಕರ್ನಾಟಕದಲ್ಲೂ ಪ್ರಧಾನಿ ಮೋದಿಜಿ ಮತ್ತು ಅವರ ತಂಡವನ್ನು ಬಿಜೆಪಿ ರೂಪದಲ್ಲಿ ಜನರು ಬಯಸುತ್ತಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿಜಿ ಭ್ರಷ್ಟಾಚಾರರಹಿತ ಆಡಳಿತ ವ್ಯವಸ್ಥೆಗೆ ಬದ್ಧರಾಗಿದ್ದಾರೆ. ಕರ್ನಾಟಕದಲ್ಲೂ ಪಾರದರ್ಶಕ ಆಡಳಿತ ನೀಡಲು ಬದ್ಧರಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.