ಬೆಂಗಳೂರು:
ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಡುಪ್ಲಿಕೇಟ್ ಮುಖ್ಯಮಂತ್ರಿ ಅಂತ ಇದ್ದಾರೆ. ಅವರು ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿ ನಗೆಪಾಟಲಿಗೀಡಾಗಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂವು ಮುಡಿಸಿದ್ದಾರೆ. ಈಗ ತೆಲಂಗಾಣದಲ್ಲಿ ಹೋಗಿ ಮತದಾರರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
“ತಮ್ಮ ಪಕ್ಷ ಅಧಿಕಾರಕ್ಕೆ ಬಂದರೇ 2 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತೆಲಂಗಾಣದಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲೇ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮೊದಲು ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ” ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಶಕ್ತಿ ಯೋಜನೆಯಿಂದ ಸಾಕಷ್ಟು ಅವಾಂತರ ಆಗಿದೆ. ಸಿಬ್ಬಂದಿ ಕೊರತೆಯಿಂದ ಸರ್ಕಾರದಲ್ಲಿ ಹಲವು ಸಮಸ್ಯೆಗೆ ಕಾರಣವಾಗಿದೆ. ಲೋಡ್ಶೆಡ್ಡಿಂಗ್ನಿಂದ ರಾಜ್ಯದಲ್ಲಿ ಕತ್ತಲು ಆವರಿಸಿದೆ. ಮಹದೇವಪ್ಪಗೂ ಕತ್ತಲು, ಕಾಕಾಪಾಟೀಲ್ಗೂ ಕತ್ತಲು ಎನ್ನುವಂತಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತೇವೆ ಅಂದಿದ್ದರು. ಗ್ರಾಹಕರೊಬ್ಬರ ಮನೆಗೆ ಹೆಚ್ಚುವರಿ ಕರೆಂಟ್ ಬಿಲ್ ಬಂದಿದೆ. ಪ್ರತಿದಿನ 7 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಸಿಎಂ ಘೋಷಿಸಿದ್ದಾರೆ. ರಾಜ್ಯದ ಯಾವ ಮೂಲೆಯಲ್ಲಿ 7 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಸಿಎಂ ಹೇಳಲಿ. ಸಿದ್ದರಾಮಯ್ಯ ಸರ್ಕಾರ ಕರ್ನಾಟಕಕ್ಕೆ ಕತ್ತಲೆ ಭಾಗ್ಯ ನೀಡಿದೆ ಎಂದು ಹರಿಹಾಯ್ದರು.
ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ 10 ಲಕ್ಷ ಜನರಿಗೆ ಹಣ ಬಂದಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಈಗ ತೆಲಂಗಾಣದಲ್ಲಿ 4 ಸಾವಿರ ಹಣ ನೀಡುತ್ತೇವೆ ಎನ್ನುತ್ತಿದ್ದಾರೆ. ಶಕ್ತಿಯೋಜನೆ ಯೋಜನೆಯಿಂದ ಸಾಕಷ್ಟು ಅವಾಂತರ ಆಗಿದೆ. ಉಚಿತ ಬಸ್ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. 200 ಯೂನಿಟ್ ಬಗ್ಗೆ ಚರ್ಚೆ ಮಾಡುತ್ತಿರಾ, ಸರ್ಕಾರದ ಬಂದು ಐದು ತಿಂಗಳಲ್ಲಿ ಕರ್ನಾಟಕ ಕತ್ತಲಲ್ಲಿ ಇದೆ. ಅಧಿಕಾರಿಗಳು, ಸಚಿವರು ಮೊಬೈಲ್ ಲೈಟ್ನಲ್ಲಿ ಸಭೆ ಮಾಡಿದ್ದಾರೆ. 24 ಗಂಟೆ ಉಚಿತ ಕರೆಂಟ್ ಕೊಡುತ್ತೆವೆ ಎಂದು ತೆಲಂಗಾಣದಲ್ಲಿ ಡುಪ್ಲಿಕೇಟ್ ಸಿಎಂ ಭಾಷಣ ಮಾಡುತ್ತಾರೆ. ಮುಖ್ಯಮಂತ್ರಿಗಳೆ ಮೊದಲು ನಮ್ಮ ರಾಜ್ಯದ ಕರೆಂಟ್ ಸಮಸ್ಯೆ ಬಗೆಹರಿಸಿ ಎಂದು ಹರಿಹಾಯ್ದರು.
ಇಂದಿರಾ ಕ್ಯಾಂಟಿನ್ನಲ್ಲೂ ಕಮಿಷನ್, ಸಮಾಜ ಕಲ್ಯಾಣ ಇಲಾಖೆಯಲ್ಲಿರುವ 11 ಸಾವಿರ ಕೋಟಿಯನ್ನು ಬಳಸಿದ್ದೀರಾ. ಅಭಿವೃದ್ಧಿ ಕಾರ್ಯಕ್ರಮಕ್ಕೆ ಎಲ್ಲಿದೆ ಹಣ. ಇದರ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣದಲ್ಲಿ ಇರುವ ಹಣವನ್ನ ಬಳಕೆ ಮಾಡಿಕೊಳ್ಳುತ್ತಿದ್ದೀರಿ ಇದು ನಿಮ್ಮ ಗ್ಯಾರೆಂಟಿನಾ? ಎಂದು ಪ್ರಶ್ನಿಸಿದರು.
ನಾನು (ಹೆಚ್ಡಿ ಕುಮಾರಸ್ವಾಮಿ) 20 ತಿಂಗಳಲ್ಲಿ 3500 ಕೋಟಿ ರೂ. ಸಾಲ ಮಾಡಿದ್ದೆ. 12 ವರ್ಷದಲ್ಲಿ ಇದ್ದಂತಹ ಸರ್ಕಾರಗಳು 1 ಲಕ್ಷ ಕೋಟಿ ರೂ. ಸಾಲ ಮಾಡಿದ್ದವು. ನೀವು ಹಿಂದೆ 5 ವರ್ಷ ಸಿಎಂ ಆಗಿದ್ದಾಗ 2 ಲಕ್ಷದ 45 ಸಾವಿರ ಕೋಟಿ ರೂ. ಸಾಲ ಮಾಡಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ. 5 ಲಕ್ಷದ 71 ಸಾವಿರದ 600 ಕೋಟಿ ರೂ. ಸಾಲ ಇದೆ ಈಗ. 8,58,15 ಕೋಟಿ ರೂ. ಸಾಲದ ಗುರಿ ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ 56 ಸಾವಿರ ಕೋಟಿ ಕಟ್ಟಬೇಕು ಅಂತಾ ನೀವೆ ಹೇಳಿದ್ದಿರಾ. ನಿಮ್ಮ ಅಧಿಕಾರಿಗಳೇ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ ಅಂತಿದ್ದಾರೆ ಎಂದು ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.