ನವ ದೆಹಲಿ: 2,000 ರೂ.ಗೆ ಮೇಲ್ಪಟ್ಟ ಯುಪಿಐ ಪಾವತಿ ವ್ಯವಸ್ಥೆ ಮೇಲೆ ಜಿಎಸ್ಟಿ ವಿಧಿಸಲು ಕೇಂದ್ರ ಸರಕಾರ ಯೋಜಿಸುತ್ತಿದೆ ಎಂಬ ಇತ್ತೀಚಿನ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟನೆ ಬಿಡುಗಡೆ ಮಾಡಿರುವ ಪ್ರೆಸ್ ಇನ್ಫರ್ಮೇಶನ್ ಬ್ಯೂರೊ, ಸರಕಾರವು ಇಂತಹ ವದಂತಿಗಳನ್ನು ಸುಳ್ಳು, ದಾರಿ ತಪ್ಪಿಸುವ ಹಾಗೂ ನಿರಾಧಾರ ಸುದ್ದಿಗಳು ಎಂದು ಕರೆದಿದೆ ಎಂದು ಹೇಳಿದೆ.
“2,000 ರೂ.ಗೆ ಮೇಲ್ಪಟ್ಟ ಯುಪಿಐ ವಹಿವಾಟುಗಳಿಗೆ ಜಿಎಸ್ಟಿ ವಿಧಿಸಲು ಕೇಂದ್ರ ಸರಕಾರ ಯೋಜಿಸುತ್ತಿದೆ ಎಂಬ ವದಂತಿಗಳು ಸುಳ್ಳು, ದಾರಿ ತಪ್ಪಿಸುವ ಹಾಗೂ ನಿರಾಧಾರ ಸುದ್ದಿಗಳಾಗಿವೆ. ಸದ್ಯ, ಸರಕಾರದೆದುರು ಅಂತಹ ಯಾವುದೇ ಪ್ರಸ್ತಾವನೆಯಿಲ್ಲ” ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದ್ದು, ಈ ಕುರಿತು ಬಳಕೆದಾರರು ಹಾಗೂ ವರ್ತಕರಿಬ್ಬರಿಗೂ ಮರು ಭರವಸೆ ನೀಡಲಾಗಿದೆ.
“ಸರಕಾರವು ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಬದ್ಧವಾಗಿದೆ” ಎಂದೂ ಪ್ರಕಟನೆಯಲ್ಲಿ ಹೇಳಲಾಗಿದೆ.