ಚೆನ್ನೈ: ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಭಾರತವು ಪ್ರತ್ಯೇಕ ದಂತ ಆರೋಗ್ಯ ನೀತಿಯನ್ನು ಹೊಂದಿಲ್ಲ. ಈ ಕಾರಣದಿಂದಾಗಿ, ದೇಶದಲ್ಲಿ ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಕಡಿಮೆಯಾಗಿದೆ ಎಂದು ದಂತವೈದ್ಯೆ ಮತ್ತು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ಥಿಂಕ್ಎಡು ಕಾನ್ಕ್ಲೇವ್ನಲ್ಲಿ ಮಂಗಳವಾರ ‘ಫಾಸ್ಟ್ ಫಾರ್ವರ್ಡಿಂಗ್ ಹೆಲ್ತ್ಕೇರ್: ಇಕ್ವಿಟಿ ಮತ್ತು ಆಕ್ಸೆಸಿಬಿಲಿಟಿ’ ಎಂಬ ಶೀರ್ಷಿಕೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತಗಳಲ್ಲಿ ದಂತ ವೈದ್ಯರನ್ನು ನೇಮಿಸಲಾಗಿದ್ದರೂ, ತಜ್ಞ ಸೇವೆಗಳು ಹೆಚ್ಚಾಗಿ ಇರುವುದಿಲ್ಲ ಎಂದು ಹೇಳಿದರು.
ಆಯುಷ್ಮಾನ್ ಭಾರತದ ಮಾಜಿ ಸಿಇಒ ಇಂದು ಭೂಷಣ್ ಮಾತನಾಡಿ, ಭಾರತದಾದ್ಯಂತ ಜನರ ಆರೋಗ್ಯ ರಕ್ಷಣೆಯ ಅರಿವು ಮತ್ತು ತಿಳುವಳಿಕೆಗೆ ಬಹಳ ವ್ಯತ್ಯಾಸವಿದೆ. ಅದು ಆದಾಯ, ಜಾತಿ ಮತ್ತು ನಗರ-ಗ್ರಾಮೀಣ ಪ್ರದೇಶಗಳ ವಾಸ ಎಂಬಂತಹ ಅಂಶಗಳನ್ನು ಆಧರಿಸಿರುತ್ತದೆ ಎಂದು ಅವರು ವಿವರಿಸಿದರು.
ಭಾರತದಲ್ಲಿ ಸುಮಾರು ಶೇ 80 ರಷ್ಟು ಮಕ್ಕಳು ದಂತಕ್ಷಯದಿಂದ ಬಳಲುತ್ತಿದ್ದಾರೆ ಏಕೆ ಎಂಬ ಬಗ್ಗೆ ದಿ ಸಂಡೇ ಸ್ಟ್ಯಾಂಡರ್ಡ್ನ ಸಲಹಾ ಸಂಪಾದಕರಾದ ರವಿಶಂಕರ್ ಅವರ ಪ್ರಶ್ನೆಗೆ ಉತ್ತರಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್, ದಂತಕ್ಷಯವು ಹೆಚ್ಚು ಪ್ರಚಲಿತವಾಗಿದೆ. ಆದರೆ, ಶಾಲಾ ದಿನಗಳಿಂದಲೇ ಮಕ್ಕಳಲ್ಲಿ ನಿಯಮಿತ ತಪಾಸಣೆಯ ಮೂಲಕ ಅದನ್ನು ತಡೆಗಟ್ಟಬಹುದು ಎಂದು ಹೇಳಿದರು.
