ಧಾರವಾಡ: ಬಿಜೆಪಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಕಮಲ ಅರಳುವಂತೆ ಮಾಡಿದ ಮತದಾರ ಪ್ರಭುಗಳಿಗೆ ಈ ಗೆಲುವು ಸಲ್ಲಬೇಕು ಎಂದು ಐದನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದ ಮತ ಎಣಿಕಾ ಕೇಂದ್ರಕ್ಕೆ ಬಂದ ವೇಳೆ ಮಾತನಾಡಿದ ಅವರು, ನಾನು ನನ್ನ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜನಾಶೀರ್ವಾದದಿಂದ ಮತ್ತೊಮ್ಮೆ ಗೆಲುವಾಗಿದೆ. ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಪ್ರತಿಸ್ಪರ್ಧಿಗಳು ನನ್ನ ವಿರುದ್ಧ ಪ್ರಚಾರ ಮಾಡುವ ಬದಲಿಗೆ ಅಪಪ್ರಚಾರ ಮಾಡುತ್ತ ಬಂದರು. ಸಾಕಷ್ಟು ಹಣ, ಹೆಂಡ ಹಂಚಿದರು. ಆದರೆ, ಜನಾಶೀರ್ವಾದವೇ ಬೇರೆ ಆಗಿದೆ. ಕರ್ನಾಟಕದ ಜನರ ಆಶೀರ್ವಾದ ಬಿಜೆಪಿ ಮೇಲಿದೆ ಎಂದರು.
ದೇಶದಲ್ಲಿ 300 ಗಡಿ ಎನ್‌ಡಿಎ ದಾಟುವ ನಿರೀಕ್ಷೆ ಇದೆ. ನಾವು ಅಂದುಕೊಂಡಂತೆ ಸೀಟು ಗೆಲ್ಲಲು ಆಗಿಲ್ಲ. ಎಲ್ಲಿ ಏನಾಗಿದೆ ಎಂಬ ವಾಸ್ತವವನ್ನು ನಾವು ನೋಡಬೇಕಿದೆ. ಸದ್ಯದಲ್ಲೇ ದೆಹಲಿಗೆ ಹೋಗುತ್ತೇನೆ. ವರಿಷ್ಠರ ಜೊತೆ ಮಾತನಾಡುತ್ತೇನೆ ಎಂದರು.
ಈ ಚುನಾವಣೆ ನಡೆದಿದ್ದು ಎನ್‌ಡಿಎ ಹಾಗೂ ಇಂಡಿ ನಡುವೆ. ಹೀಗಾಗಿ ಎನ್‌ಡಿಎ ಜೊತೆ ಇದ್ದವರು ನಮ್ಮ ಜೊತೆ ಗಟ್ಟಿಯಾಗಿ ನಿಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಪರ್ಸೆಂಟೇಜ್ ವೋಟ್‌ಗಳು ಕಡಿಮೆಯಾಗಿರುವ ಕಾರಣ ಲೀಡ್ ಕಡಿಮೆಯಾಗಿದೆ. ಈಗಾಗಲೇ ನಾವು ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಮುನ್ನಡೆಸಿಕೊಂಡು ಹೋಗುತ್ತೇನೆ. ನಾನು ನನ್ನ ಖಾತೆಯನ್ನು ಸರಿಯಾಗಿ ನಿಭಾಯಿಸಿದ್ದೇನೆ. ಪ್ರಧಾನಿ ಅವರು ಐದು ವರ್ಷ ನನಗೆ ಸಚಿವರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದರು. ದಿಂಗಾಲೇಶ್ವರರ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ ಎಂದರು.