ಬೆಂಗಳೂರು:
ನಗರದ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಬಳಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದ ಪರಿಣಾಮ ಮಹಿಳೆ ಮತ್ತು ಮಗು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂನ ಲೈನ್ ಮ್ಯಾನ್, ಎಇ ಹಾಗೂ ಎಇಇ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಇಂಧನ ಖಾತೆ ಸಚಿವ ಕೆಜೆ ಜಾರ್ಜ್ X ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಸ್ತೆ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನಪ್ಪಿದ ಘಟನೆ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ನಡೆದಿತ್ತು.
ಈ ಬಗ್ಗೆ X ನಲ್ಲಿ ಪೊಸ್ಟ್ ಮಾಡಿರುವ ಅವರು: “ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ವಿದ್ಯುತ್ ಶಾಕ್‌ಗೆ ಒಬ್ಬ ಮಹಿಳೆ ಮತ್ತು ಒಂದು ಮಗು ಸಾವನ್ನಪ್ಪಿರುವ ದುರ್ದೈವದ ಘಟನೆ ನಡೆದಿದೆ. ಈ ದುರದೃಷ್ಟಕರ ಸಾವುಗಳಿಗೆ ಕಾರಣವಾದ ಘಟನೆಯ ಕುರಿತು ನಾವು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದೇವೆ. ಇದರ ವರದಿಯನ್ನು ಎದುರು ನೋಡುತ್ತಿದ್ದೇವೆ. ಈ ಅಪಘಾತಕ್ಕೆ ಕಾರಣರಾದ AE ಮತ್ತು AEE ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮತ್ತು ಇದಕ್ಕೆ ಕಾರಣಾದವರು ಮತ್ತಾರೇ ಇದ್ದರೂ ನಿರ್ದಾಕ್ಷಿಣ್ಯಯವಾಗಿ ಕ್ರಮ ಜರುಗಿಸಲಾಗುವುದು. ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಿದೆ,” ಎಂದು ಬರೆದುಕೊಂಡಿದ್ದಾರೆ.