ಶಿವಮೊಗ್ಗ:
ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲಿಯೇ ಗಾಂಜಾ ಬೆಳೆದ ಎಂಬಿಬಿಎಸ್, ಎಂಡಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ರಾಜ್ಯದ ವಿಘ್ನರಾಜ್ (28), ಪಾಂಡಿದೊರೈ (27) ಹಾಗೂ ಕೇರಳ ರಾಜ್ಯದ ವಿನೋದ್ ಕುಮಾರ್ (27) ಎಂದು ಗುರ್ತಿಸಲಾಗಿದೆ.
ಮನೆ ಮಾಲಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ ಹೈಟೆಕ್ ಫಾರ್ಮಿಂಗ್ ಮೂಲಕ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡುತ್ತಿದ್ದರು. ರುವರೆ ವರ್ಷದಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆನ್ನಲಾಗಿದ್ದು, ಇದರಲ್ಲಿ ಇನ್ನು ಭಾಗಿಯಾಗಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ 227 ಗ್ರಾಂ ಒಣ ಗಾಂಜಾ, 1.530 ಕೆ.ಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳು, 3 ಕೆನಾಬಿಸ್ ಆಯಿಲ್ ಸಿರೀಂಜ್ ರೀತಿಯ ವಸ್ತುಗಳು, 3 ಕಬ್ಬಿಣದ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸ್ಟಾಂಡ್ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 1 ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಬಬಕಲೈಸರ್ , 3 ಎಲ್ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ ಮತ್ತು 4 ಹುಕ್ಕಾ ಕ್ಯಾಪ್ಗಳು, ಗಾಂಜಾ ಗಿಡದ ಕಾಂಡಗಳು, 19 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ವಿರುದ್ದ 0195/2023 ಕಲಂ NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.