ಮಂಗಳೂರು:
ಟಿಪ್ಪರ್ ಲಾರಿಯೊಂದು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು 2 ಕಿ.ಮೀ ವರೆಗೂ ಎಳೆದೊಯ್ದಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾರು ಲಾರಿಯ ಚಾಸಿಸ್ ನ ಅಡಿಯಲ್ಲಿ ಸಿಲುಕಿಕೊಂಡಿತ್ತು. ಕಾರಿನಲ್ಲಿದ್ದ ಮೂವರು ವ್ಯಕ್ತಿಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಕಾರನ್ನು ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ಅಪಘಾತಕ್ಕೀಡಾದ ಸ್ಯಾಂಟ್ರೋ ಕಾರು ಸಾಗರದಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಟಿಪ್ಪರ್ ಬೆಲ್ಮಣ್ ನಿಂದ ಬೈಕಂಪಾಡಿಗೆ ತೆರಳುತ್ತಿತ್ತು. ಪೊಲೀಸರು ಟಿಪ್ಪರ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದು, “ಕಾರು ಟಿಪ್ಪರ್ ಕೆಳಗೆ ಸಿಲುಕಿದ್ದು ತನಗೆ ತಿಳಿದಿರಲಿಲ್ಲ ಎಂದು ಚಾಲಕ” ಹೇಳಿಕೆ ನೀಡಿದ್ದಾನೆ.
ಕಾರಿಗೆ ಡಿಕ್ಕಿ ಹೊಡೆದಿದ್ದು ಚಾಲಕನಿಗೆ ತಿಳಿದಿತ್ತು ಆದರೆ ಯಾರಾದರೂ ನೋಡಿದರೆ ಎಂಬ ಭಯದಿಂದ ವೇಗವಾಗಿ ಚಲಿಸಿದ್ದಾನೆ. ಸ್ಥಳೀಯರು ಇದನ್ನು ಗಮನಿಸಿ ಚಾಲಕನನ್ನು ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.