ಬೆಂಗಳೂರು: ನಗರದ ಹಾಳಾಗುತ್ತಿರುವ ಮೂಲಸೌಕರ್ಯವು ಸ್ಟಾರ್ಟ್‌ಅಪ್ ಜಗತ್ತಿಗೆ ದೊಡ್ಡ ಶಾಕ್ ತಂದಿದೆ. BlackBuck ಕಂಪನಿಯ ಸಿಇಒ ರಾಜೇಶ್ ಯಬಾಜಿ ಅವರು ಕಂಪನಿಯನ್ನು ಬೆಂಗಳೂರಿನಿಂದ ಹೊರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದು, ಬೆಳ್ಳಂದೂರಿನ ರಸ್ತೆಗಳ ದಯನೀಯ ಸ್ಥಿತಿ ಹಾಗೂ ಅಸಹನೀಯ ಪ್ರಯಾಣ ಸಮಯವನ್ನು ಕಾರಣವಾಗಿ ತಿಳಿಸಿದ್ದಾರೆ.
“ಒಂಬತ್ತು ವರ್ಷಗಳಿಂದ ಬೆಳ್ಳಂದೂರು ನಮ್ಮ ಆಫೀಸ್ ಮತ್ತು ಮನೆ. ಆದರೆ ಈಗ ಇಲ್ಲಿ ಮುಂದುವರೆಯುವುದು ಅಸಾಧ್ಯವಾಗಿದೆ. ಒಂದು ಸೈಡ್ ಪ್ರಯಾಣಕ್ಕೆ ಒಂದೂವರೆ ಗಂಟೆ ಬೇಕಾಗಿದೆ. ರಸ್ತೆಗಳಲ್ಲಿ ಗುಂಡಿಗಳು, ಧೂಳು ತುಂಬಿಕೊಂಡಿದೆ. ಅವುಗಳನ್ನು ಸರಿಪಡಿಸಲು ಕನಿಷ್ಠ ಉದ್ದೇಶವೂ ಇಲ್ಲ. ನಾವು ಇಲ್ಲಿಂದ ಹೊರ ಹೋಗಲು ನಿರ್ಧಾರ ಮಾಡಿದ್ದೇವೆ,” ಎಂದು ಯಬಾಜಿ X ನಲ್ಲಿ ಬರೆದಿದ್ದಾರೆ.

ಈ ಹೇಳಿಕೆ ಉದ್ಯಮ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ. ಮೋಹನ್‌ದಾಸ್ ಪೈ ಮತ್ತು ಬಯೋಕಾನ್‌ನ ಕಿರಣ್ ಮಜುಂದಾರ್-ಶಾ ಅವರು ಯಬಾಜಿಯ ಅಸಮಾಧಾನಕ್ಕೆ ಬೆಂಬಲ ವ್ಯಕ್ತಪಡಿಸಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೈ ಅವರು ಔಟರ್ ರಿಂಗ್ ರೋಡ್ ಕಾರಿಡಾರ್‌ನಲ್ಲಿ 9 ಕೋಟಿ ಚ.ಅಡಿ ಆಫೀಸ್ ಸ್ಪೇಸ್ ಮತ್ತು 8 ಲಕ್ಷ ಉದ್ಯೋಗಿಗಳು ಇದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಹಲವು ಬಾರಿ 20,000 ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದರೂ, ಉದ್ಯಮ ವಲಯದ ಅಸಮಾಧಾನ ಇನ್ನೂ ತೀವ್ರವಾಗಿದೆ. ಪೈ ಅವರು ಸ್ಥಿತಿ ಬದಲಾಗದಿದ್ದರೆ ಕಂಪನಿಗಳು ಹೈದರಾಬಾದ್ ಅಥವಾ ನೋಯ್ಡಾಕ್ಕೆ ಸ್ಥಳಾಂತರವಾಗಬಹುದು ಎಂದು ಎಚ್ಚರಿಸಿದ್ದಾರೆ.
BlackBuck ಸಿಇಒ ಅವರ ಈ ನಿರ್ಧಾರವು ಬೆಂಗಳೂರಿನ ಸ್ಟಾರ್ಟ್‌ಅಪ್ ರಾಜಧಾನಿ ಇಮೇಜ್‌ಗೆ ನೇರ ಸವಾಲು ಎಸೆದಿದ್ದು, ಅಸಮರ್ಪಕ ನಗರ ಆಡಳಿತದಿಂದಾಗಿ ಜಾಗತಿಕ ಕಂಪನಿಗಳು ಮತ್ತು ಉದ್ಯಮಿಗಳು ಪರ್ಯಾಯ ನಗರಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವುದನ್ನು ತೋರಿಸಿದೆ.