ಬೆಂಗಳೂರು: ದೇವರಾಜ ಅರಸ್ ಅವರ ದೀರ್ಘಾವಧಿಯ ಮುಖ್ಯಮಂತ್ರಿ ಅವಧಿ ದಾಖಲೆಗೆ ಸಿದ್ದರಾಮಯ್ಯ ಅವರು ಇವತ್ತು ಸಮನಾಗಿದ್ದಾರೆ. “ನಾನು ಯಾವುದೇ ದಾಖಲೆ ಮುರಿಯಬೇಕು ಎಂಬ ಉದ್ದೇಶದಿಂದ ರಾಜಕೀಯ ಮಾಡಿಲ್ಲ. ಇವತ್ತು ಸಮವಾಗಿದೆ, ನಾಳೆ ಅದು ಮುರಿಯುತ್ತದೆ,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ದೇವರಾಜ ಅರಸ್ ಅವರು ಎಷ್ಟು ವರ್ಷ ಸಿಎಂ ಆಗಿದ್ದರು ಎಂಬ ಮಾಹಿತಿ ಇವತ್ತು ಗೊತ್ತಾಯ್ತು ಎಂದು ಹೇಳಿದ ಸಿದ್ದರಾಮಯ್ಯ, “ಜನರ ಆಶೀರ್ವಾದದಿಂದಲೇ ಈ ಅವಕಾಶ ಬಂದಿದೆ,” ಎಂದು ಅಭಿಪ್ರಾಯಪಟ್ಟರು. ದೇವರಾಜ ಅರಸ್ ಹಾಗೂ ತಾವು ಇಬ್ಬರೂ ಮೈಸೂರು ಮೂಲದವರಾಗಿರುವುದು ಈ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ಹೇಳಿದರು.
ಪೂರ್ಣಾವಧಿ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ, “ವಿಶ್ವಾಸ ಇದೆ. ಆದರೆ ಎಲ್ಲವೂ ಹೈಕಮಾಂಡ್ ತೀರ್ಮಾನದ ಮೇಲೆ ಅವಲಂಬಿತವಾಗಿದೆ,” ಎಂದು ಸಿದ್ದರಾಮಯ್ಯ ಉತ್ತರಿಸಿದರು.
ತಮ್ಮ ರಾಜಕೀಯ ಪಯಣವನ್ನು ಸ್ಮರಿಸಿದ ಅವರು, “ಒಮ್ಮೆ ಎಂಎಲ್ಎ ಆಗಬೇಕು ಎನ್ನುವುದೇ ನನ್ನ ಕನಸು. ಆದರೆ ನಂತರ ಸಚಿವ, ಉಪಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಆಗುವ ಅವಕಾಶಗಳು ಬಂದವು,” ಎಂದು ಹೇಳಿದರು.
ರಾಜಕೀಯದಿಂದ ತಮಗೆ ತೃಪ್ತಿ ಸಿಕ್ಕಿದೆ ಎಂದ ಅವರು, “ರಾಜಕೀಯ ಅಂದರೆ ಬಡವರು, ದಲಿತರು, ಹಿಂದುಳಿದವರಿಗೆ ನ್ಯಾಯ ಕೊಡಿಸುವುದು. ಸಮಾಜದಲ್ಲಿ ಅಸಮಾನತೆ ಇರುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ,” ಎಂದು ಹೇಳಿದರು.
ನಾಟಿಕೋಳಿ ವಿಚಾರವಾಗಿ ಅಭಿಮಾನಿಗಳು ಮಾಡುತ್ತಿರುವ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾನು ಹಳ್ಳಿಯವನಲ್ಲವಾ. ನಮ್ಮ ಊರಲ್ಲಿ ಅತಿಥಿಗಳು ಬಂದಾಗ ಮಾತ್ರ ನಾಟಿಕೋಳಿ ಮಾಡುತ್ತಿದ್ದರು,” ಎಂದು ನಗೆಚುಟುಕೆಯೊಂದಿಗೆ ಹೇಳಿದರು.
ಬಳ್ಳಾರಿ ಪ್ರಕರಣ ಸೇರಿದಂತೆ ಇತರೆ ವಿವಾದಗಳ ಕುರಿತು ಮಾತನಾಡಿದ ಅವರು, “ತನಿಖೆ ನಡೆಯುತ್ತಿದೆ. ಕಾನೂನು ತನ್ನ ಕೆಲಸ ಮಾಡಲಿ,” ಎಂದು ತಿಳಿಸಿದರು. ಜೆಡಿಎಸ್ ಹಾಗೂ ಬಿಜೆಪಿ ನಾಯಕರು ರಾಜಕೀಯವಾಗಿ ಆರೋಪ ಮಾಡುತ್ತಾರೆ, ಕಾನೂನುಬದ್ಧವಾಗಿ ಅಲ್ಲ ಎಂದು ಟೀಕಿಸಿದರು.
ಸಂಪುಟ ಪುನರಚನೆ ಹಾಗೂ ಹೈಕಮಾಂಡ್ ಭೇಟಿಗಳ ಬಗ್ಗೆ, “ಚರ್ಚೆಗಳು ನಡೆಯುತ್ತಿವೆ. ತೀರ್ಮಾನವಾದಾಗ ನೋಡೋಣ,” ಎಂದು ಸಿದ್ದರಾಮಯ್ಯ ಹೇಳಿದರು.
