ನವದೆಹಲಿ:
ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ದಿಶಾ ರವಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಪಟಿಯಾಲ ಹೌಸ್ ಕೋರ್ಟ್, 1 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದೆ.
ದಿಶಾ ರವಿ ಅವರ ಮೂರು ದಿನಗಳ ನ್ಯಾಯಾಂಗ ಬಂಧನ ಅವಧಿ ನಿನ್ನೆ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಕೋರ್ಟ್ ಮತ್ತೆ ಒಂದು ದಿನ ದೆಹಲಿ ಪೊಲೀಸರ ವಶಕ್ಕೆ ನೀಡಿತ್ತು.
ದಿಶಾ ರವಿ ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪೊಲೀಸರು, ಖಲಿಸ್ತಾನಿ ಪರವಾದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಭಾರತವನ್ನು ಅವಹೇಳನ ಮಾಡಲು ಮತ್ತು ರೈತರ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಯನ್ನು ಉಂಟುಮಾಡುವ ಜಾಗತಿಕ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿತ್ತು.
ಖಲಿಸ್ತಾನವನ್ನು ಪ್ರತಿಪಾದಿಸುವವರೊಂದಿಗೆ ಸೇರಿ ಟೂಲ್ ಕಿಟ್ ತಯಾರಿಸಿ ಹಂಚಿಕೊಂಡಿದ್ದಾಳೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ವಾದ-ಪ್ರತಿವಾದ ಆಲಿಸಿದ ದೆಹಲಿ ಪಟಿಯಾಲ ಹೌಸ್ ಕೋರ್ಟ್, ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್’ ಅನ್ನು ಸಿದ್ಧಪಡಿಸಿ, ಅದನ್ನು ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ ಆರೋಪದ ಮೇಲೆ ದಿಶಾ ರವಿ ಅವರನ್ನು ಫೆಬ್ರವರಿ 13 ರಂದು ಬಂಧಿಸಲಾಗಿತ್ತು.