ಬೆಂಗಳೂರು: ನಗರದ ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಯುವಕ-ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರನ್ನು ಒಡಿಶಾ ರಾಜ್ಯದ ಡೆಂಕನಾಲ್ ಜಿಲ್ಲೆಯ ರಾಕೇಶ್ ಪಾತ್ರ (23) ಮತ್ತು ಸೀಮಾ ನಾಯಕ್ (25) ಎಂದು ಗುರುತಿಸಲಾಗಿದೆ. ಇವರು ಇಬ್ಬರೂ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ರಿಟಿಷ್ ಬಯೋಲಾಜಿಕಲ್ಸ್ ಕಂಪನಿಯಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದರು.
ಸುಮಾರು 10 ರಿಂದ 12 ದಿನಗಳ ಹಿಂದೆ ₹3,500 ಬಾಡಿಗೆಗೆ ಮನೆ ತೆಗೆದುಕೊಂಡು ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮನೆಯ ಬಾಗಿಲು ತೆರೆಯದಿದ್ದ ಹಿನ್ನೆಲೆಯಲ್ಲಿ ಮನೆಯ ಮಾಲೀಕನಿಗೆ ಅನುಮಾನ ಉಂಟಾಗಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಪೊಲೀಸರು ಸ್ಥಳಕ್ಕೆ ತೆರಳಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿದರು.
ಪೊಲೀಸರ ವರದಿ ಪ್ರಕಾರ:
“ಜಿಗಣಿ ಠಾಣಾ ವ್ಯಾಪ್ತಿಯ ಕಲ್ಬಾಳು ಗ್ರಾಮದಲ್ಲಿ ಇಬ್ಬರು ನೇಣು ಹಾಕಿಕೊಂಡಿದ್ದರು. ಒಳಗೆ ಪ್ರವೇಶಿಸಿದಾಗ ಮೊದಲು ರಾಕೇಶ್ ಪಾತ್ರ ನೇಣು ಹಾಕಿಕೊಂಡಿದ್ದು ಕಂಡುಬಂತು. ನಂತರ ಸೀಮಾ ನಾಯಕ್ ಚಾಕುವಿನಿಂದ ಆ ಹಗ್ಗವನ್ನು ಕತ್ತರಿಸಿ, ತಾನೂ ನೇಣು ಹಾಕಿಕೊಂಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ,” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇವರು ಮದುವೆಯಾಗಿರಲಿಲ್ಲ, ಲಿವ್-ಇನ್ ಸಂಬಂಧದಲ್ಲಿದ್ದರು. ಅಕ್ಕಪಕ್ಕದವರ ಹೇಳಿಕೆಯ ಪ್ರಕಾರ, ರಾಕೇಶ್ ಮದ್ಯಪಾನ ಮಾಡಿ ಆಗಾಗ ಸೀಮಾ ಜೊತೆ ಜಗಳವಾಡುತ್ತಿದ್ದನಂತೆ. ಭಾನುವಾರದಂದು ಮದ್ಯಪಾನ ಮಾಡಿ ವಾಗ್ವಾದ ನಡೆದಿದ್ದು ನಂತರ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
“ಮೃತರ ಕುಟುಂಬಸ್ಥರೊಂದಿಗೆ ಒಡಿಶಾದಿಂದ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಸಂಪರ್ಕವಾದ ಬಳಿಕ ಪ್ರಕರಣದ ನಿಖರ ಕಾರಣ ತಿಳಿದುಬರುವುದು,” ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಶವಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
