ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿದ್ದ ಚಾರಣಿಗರ ಪೈಕಿ, ರಕ್ಷಿಸಲ್ಪಟ್ಟ 13 ಮಂದಿಯ ತಂಡವು ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಕೃಷ್ಣಬೈರೆಗೌಡ ಅವರ ಜೊತೆ ವಿಮಾನದಲ್ಲಿ 13 ಮಂದಿ ಕನ್ನಡಿಗರು ಆಗಮಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಕಾದಿದ್ದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ಬಂದ ಚಾರಣಿಗರನ್ನು ಸ್ವಾಗತಿಸಿದರು.
ಹವಾಮಾನ ವೈಪರೀತ್ಯದಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬುಧವಾರ ಐದು ಮೃತದೇಹಗಳು ಸಿಕ್ಕಿದ್ದವು. ನಾಪತ್ತೆಯಾದ ನಾಲ್ವರ ಪತ್ತೆಗೆ ಪ್ರತಿಕೂಲ ಪರಿಸ್ಥಿತಿಯಿಂದ ಬುಧವಾರ ಸಂಜೆ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.
ಚಾರಣಿಗರಾದ ಸೌಮ್ಯಾ ಕೆನಾಲೆ, ಸ್ಮೃತಿ , ಶೀನಾ ಲಕ್ಷ್ಮಿ, ಎಸ್.ಶಿವ ಜ್ಯೋತಿ, ಅನಿಲ್, ಭರತ್ ಬೊಮ್ಮನಗೌಡರ್, ಮಧುಕಿರಣ್ ರೆಡ್ಡಿ, ಬಿ.ಎಸ್.ಜೈಪ್ರಕಾಶ್ ,ಎಸ್.ಸುಧಾಕರ್, ಎಂ.ಕೆ.ವಿನಯ್, ವಿವೇಕ್ ಶ್ರೀಧರ್, ಎಂ.ನವೀನ್, ರಿತಿಕಾ ಜಿಂದಾಲ್ ಅವರನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಯಿತು.