ಬೆಳಗಾವಿ:
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಟ್ರಯಲ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿತ ಉಗ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಕರ್ನಾಟಕ-ಮಹಾರಾಷ್ಟ್ರದ ಗಡಿಗೆ ಹತ್ತಿರವಿರುವ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಬಾಂಬ್ ಸ್ಫೋಟ ನಡೆಸಿದ್ದರು. ಈ ಇಬ್ಬರು ಶಂಕಿತ ಉಗ್ರರನ್ನು ಪುಣೆಯ ಕೊಥ್ರೂಡ್ ಪೊಲೀಸರು ಬಂಧಿಸಿದ್ದರು.
ಶಂಕಿತ ಉಗ್ರರು ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರ ಮಾರ್ಗವಾಗಿ ಮಹಾರಾಷ್ಟ್ರದ ಅಂಬೋಲಿ ಅರಣ್ಯಕ್ಕೆ ಪ್ರಯಾಣ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರಕ್ಕೆ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವಾರ ಪೆಟ್ರೋಲಿಂಗ್ ನಡೆಸುತ್ತಿದ್ದ ಪುಣೆಯ ಕೊಥ್ರೂಡ್ ಪೊಲೀಸರು ಬೈಕ್ ಕಳ್ಳತನದ ಆರೋಪದಡಿ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಅಮಿರ್ ಅಬ್ದುಲ್ ಹಮೀದ್ ಖಾನ್ ಮತ್ತು ಮೊಹಮ್ಮದ್ ಯಾಕೂಬ್ ಸಾಕಿ ಎಂಬವರನ್ನು ಬಂಧಿಸಿದಾಗ ಅವರು ನೀಡಿದ ಮಾಹಿತಿ ಆಧಾರದಲ್ಲಿ ಐಸಿಸ್ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಅಂಬೋಲಿ ಪ್ರದೇಶದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸಿದ ಮಾಹಿತಿ ಬಹಿರಂಗವಾಗಿದೆ.