ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ಸಮೀಪದ ಮಂಗಳೂರು ಗ್ರಾಮದಲ್ಲಿ ಭಾನುವಾರ ಲಘು ತರಬೇತಿ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿ ಇದ್ದ ಇಬ್ಬರು ಪೈಲಟ್ಗಳು ಅಪಾಯದಿಂದ ಪಾರಾಗಿದ್ದಾರೆ.
ರೆಡ್ ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ಸೆಸ್ನಾ 172 (ಟ್ಯಾಂಗೋ ಚಾರ್ಲಿ) ವಿಮಾನವು ತರಬೇತಿ ಹಾರಾಟದಲ್ಲಿದ್ದು, ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವೇಳೆ ನೆಲಕ್ಕುರುಳಿದೆ ಎಂದು ತಿಳಿದುಬಂದಿದೆ.
ವಿಮಾನದಲ್ಲಿ ತರಬೇತಿ ನೀಡುತ್ತಿದ್ದ ಕ್ಯಾಪ್ಟನ್ ಕುನಾಲ್ ಮಲೋತ್ರಾ ಹಾಗೂ ಟ್ರೈನಿ ಪೈಲಟ್ ಗೌತಮ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿ ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.
