ಬೆಂಗಳೂರು:
ಶಿವಾಜಿನಗರ ಜನನಿಬಿಡ ಪ್ರದೇಶದಲ್ಲಿ ಫುಡ್ ಸ್ಟಾಲ್ ಮೇಲೆ ನೀರಿನ ಟ್ಯಾಂಕ್ ಕುಸಿದುಬಿದ್ದು ಇಬ್ಬರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ದುರ್ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಲ್ಲಿ ಒಬ್ಬಾತನ ಗುರುತು ಅತುಲ್ ಎಂದು ಗೊತ್ತಾಗಿದ್ದು ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಮತ್ತೊಬ್ಬನಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
64 ಸಾವಿರ ಲೀಟರ್ ನ ವಾಟರ್ ಟ್ಯಾಂಕರ್ ಕುಸಿದು ಈ ಅವಘಡ ಸಂಭವಿಸಿದೆ. ಶಿವಾಜಿನಗರದ ಬಸ್ ನಿಲ್ದಾಣದ ಬಳಿ ಎಗ್ ರೈಸ್ ಮಾರಾಟ ಮಾಡುತ್ತಿದ್ದವನ ಸೇರಿ ತಿನ್ನಲು ಬಂದಿದ್ದ ವ್ಯಕ್ತಿಯ ಮೇಲೂ ನಾಲ್ಕು ಅಂತಸ್ತಿನ ಮೇಲಿದ್ದ ವಾಟರ್ ಟ್ಯಾಂಕ್ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನುಳಿದಂತೆ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೀರು ತುಂಬಿದ್ದ ಸಿಂಟ್ಯಾಕ್ಸ್ನಿಂದ ನೀರು ಲೀಕ್ ಆಗಿ ಗೋಡೆ ವೀಕ್ ಆಗಿದೆ. ಈ ಹಿನ್ನಲೆ ಗೋಡೆ ಹಾಗೂ ಟ್ಯಾಂಕ್ ಎರಡೂ ಕುಸಿದು, ಕೆಳಗಡೆ ಎಗ್ರೈಸ್ ವ್ಯಾಪಾರ ಮಾಡುತ್ತಿದ್ದವನ ಜೊತೆಗೆ ಅಂಗಡಿಗೆ ಬಂದಿದ್ದ ಗಿರಾಕಿಯ ಮೇಲೂ ಬಿದ್ದು ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಮಲ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೇಲ್ನೋಟಕ್ಕೆ ಟ್ಯಾಂಕ್ನ ಗೋಡೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಮಾಹಿತಿ ಇದ್ದು, ಬಿಬಿಎಂಪಿ ಪರೀಶೀಲನೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.