ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಪುತ್ರ ಉದಯನಿಧಿ ನಾಳೆ (ಬುಧವಾರ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿ. 14ರಂದು ಬೆಳಗ್ಗೆ 9.30ಕ್ಕೆ ಉದಯನಿಧಿ ಸ್ಟಾಲಿನ್ (Udhayanidhi Stalin) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಉದಯನಿಧಿ ಸ್ಟಾಲಿನ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸುವಂತೆ ತಮಿಳುನಾಡು ರಾಜ್ಯಪಾಲರಾದ ಆರ್.ಎನ್ ರವಿ ಅವರಿಗೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಆ ಶಿಫಾರಸಿಗೆ ಅನುಮೋದನೆ ನೀಡಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿಸೆಂಬರ್ 14ರಂದು ಚೆನ್ನೈನ ರಾಜಭವನದ ದರ್ಬಾರ್ ಹಾಲ್‌ನಲ್ಲಿ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ ಎಂದು ರಾಜಭವನದ ಅಧಿಕೃತ ಪ್ರಕಟಣೆ ತಿಳಿಸಿದೆ. ಡಿಎಂಕೆ ಮೂಲಗಳು ಮೊದಲ ಬಾರಿಗೆ ಸಚಿವರಾಗುತ್ತಿರುವ ಉದಯನಿಧಿ ಸ್ಟಾಲಿನ್ ಅವರಿಗೆ ಕ್ರೀಡಾ ಖಾತೆಯನ್ನು ನೀಡುವ ಸಾಧ್ಯತೆಯಿದೆ. ಈ ಮೂಲಕ ತಮಿಳುನಾಡಿನಲ್ಲಿ ಕ್ಯಾಬಿನೆಟ್ ಪುನರ್ರಚನೆ ಆಗುವ ಸಾಧ್ಯತೆಯ ಬಗ್ಗೆ ಸುಳಿವು ನೀಡಲಾಗಿದೆ.
ಇದನ್ನೂ ಓದಿ: Chennai Rain: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಅಬ್ಬರ; ತಿರುವಳ್ಳೂರ್, ಕಾಂಚೀಪುರಂನಲ್ಲಿ ಇಂದು ಶಾಲೆಗಳಿಗೆ ರಜೆ
ಡಿಎಂಕೆ ಅಧಿಕಾರಕ್ಕೆ ಬಂದ 1 ವರ್ಷದ ನಂತರ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಮೊದಲ ಸಂಪುಟ ವಿಸ್ತರಣೆ ಇದಾಗಿದೆ. 45 ವರ್ಷದ ಉದಯನಿಧಿ ಸ್ಟಾಲಿನ್ ಕಳೆದ ವರ್ಷ ಚೆಪಾಕ್ ತಿರುವಲ್ಲಿಕೇಣಿ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾಗಿದ್ದರು. ಈ ಹಿಂದೆ ಅವರ ಅಜ್ಜ ಕರುಣಾನಿಧಿ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಉದಯನಿಧಿ ಪ್ರಸ್ತುತ ಡಿಎಂಕೆ ಪಕ್ಷದ ಯುವ ಘಟಕದ ಮುಖ್ಯಸ್ಥರಾಗಿದ್ದಾರೆ. ಈ ಸ್ಥಾನವನ್ನು ದಶಕಗಳಿಂದ ಸ್ಟಾಲಿನ್ ಹೊಂದಿದ್ದರು. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಶಾಸಕ ಮತ್ತು ಮೇಯರ್ ಮಟ್ಟದಿಂದ ಸಿಎಂ ಸ್ಥಾನಕ್ಕೆ ಏರಿದ್ದಾರೆ. ಆಡಳಿತಾರೂಢ ಡಿಎಂಕೆಯು ಚುನಾಯಿತ ಸ್ಥಾನಗಳಲ್ಲಿ ಲೋಕಸಭೆಯ ಸಂಸದರಾದ ಎಂಕೆ ಕನಿಮೋಳಿ ಮತ್ತು ದಯಾನಿಧಿ ಮಾರನ್ ಸೇರಿದಂತೆ ಕರುಣಾನಿಧಿ ಕುಟುಂಬದ ನಾಲ್ವರು ಸದಸ್ಯರು ಅಧಿಕಾರದಲ್ಲಿದ್ದಾರೆ.