ಬೆಂಗಳೂರು:
‘ನನ್ನನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನನ್ನ ಮಾಲಕತ್ವದ ಕಾರ್ಖಾನೆಗೆ ನೋಟಿಸ್ ನೀಡಿದೆ’ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಶನಿವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಬಸವನಗೌಡ ಪಾಟೀಲ್ ಯತ್ನಾಳ್, ‘ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಕಾರ್ಖಾನೆಯನ್ನು ಮುಚ್ಚಿಸುವುದರಿಂದ ಇವರು ಏನನ್ನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತೆ ತೆರೆಯುವುದು ನಿಶ್ಚಿತ, ಈ ನಿಟ್ಟಿನಲ್ಲಿ ಕಾನೂನು ಹೋರಾಟವನ್ನು ನಾನು ಮಾಡುತ್ತೇನೆ’ ಎಂದು ಎಚ್ಚರಿಸಿದ್ದಾರೆ.
‘ಕೈ’ಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬುದು ಗೊತ್ತಿರುವ ವಿಷಯವೇ. ಬಡವರಿಗೆ, ದೀನ-ದಲಿತರಿಗೆ, ಪಕ್ಷದ ಕಾರ್ಯಕರ್ತರಿಗೆ ಸಹಾನೂಭೂತಿಯಿಂದ ಕಾಣುತ್ತ ಬಂದಿರುವ ನಾನು, ನನ್ನ ಮಿತಿಯಲ್ಲಿ ನನ್ನದೇ ಕಾರ್ಖಾನೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಜಿಲ್ಲೆಯ ಆರ್ಥಿಕತೆಯನ್ನು ಸುಧಾರಿಸಲು ನನ್ನ ಅಳಿಲು ಸೇವೆಯೂ ಇದೆ’ ಎಂದು ಯತ್ನಾಳ್ ತಿಳಿಸಿದ್ದಾರೆ.

‘ಸರಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ. ರೈತರಿಗೆ ನೆರವಾಗಲು ಹಾಗು ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ. ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ’ ಎಂದು ಯತ್ನಾಳ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.