ಹುಬ್ಬಳ್ಳಿ: ಇಂದು ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಶಾ ನೆಹರು ಮೈದಾನದಲ್ಲಿ, ನಿರಂಜನ್ ಹಿರೇಮಠ್ ಮತ್ತು ಗೀತಾ ಹಿರೇಮಠ್ ಅವರನ್ನು ಭೇಟಿಯಾದರು. ಕಾಲೇಜ್ ಕ್ಯಾಂಪಸ್ನಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಪೋಷಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಂತ್ವನ ಹೇಳಿದ್ದಾರೆ.
ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಅಮಿತ್ ಶಾ ಭೇಟಿ ಬಳಿಕ ಮಾತನಾಡಿದ ನಿರಂಜನ್ ಹಿರೇಮಠ್, ನನಗೆ ಕೆಲವೊಂದು ಬೇಡಿಕೆಗಳಿತ್ತು. ಎಫ್ಐಆರ್ ಪ್ರತಿ ಜೊತೆ ಬೇಡಿಕೆಗಳ ಮನವಿಯನ್ನು ಕೊಟ್ಟಿದ್ದೇನೆ. ನೇಹಾ ಹೆಸರಲ್ಲೇ ಪ್ರತ್ಯೇಕ ಕಾನೂನು ಮಾಡಬೇಕು. ಈ ರೀತಿಯ ಅಪರಾಧ ಎಸಗುವವರಿಗೆ ಗೆಲ್ಲು ಶಿಕ್ಷೆ ಆಗುವ ಕಾನೂನು ತರಬೇಕು ಎಂದು ಹೇಳಿದರು.
ಗಲ್ಲು ಶಿಕ್ಷೆಯಾಗುವಂತಹ ಕಠಿಣ ಕಾನೂನುಗಳು ಬಂದಾಗ ಮಾತ್ರ ಈ ರೀತಿಯ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ. ಕಾನೂನಿಗೆ ತಿದ್ದುಪಡಿ ತರುವಂತೆ ಮನವಿ ಮಾಡಿದ್ದೇನೆ ಎಂದು ನಿರಂಜನ್ ಹಿರೇಮಠ್ ತಿಳಿಸಿದರು. ಅಮಿತ್ ಶಾ ಅವರು ಘಟನೆ ಕುರಿತು ಎಲ್ಲ ರೀತಿಯ ಮಾಹಿತಿ ಪಡೆದಿದ್ದಾರೆ. ಸಿಐಡಿಯಿಂದ ನ್ಯಾಯ ಸಿಗದಿದ್ದಲ್ಲಿ ಸಿಬಿಐ ತನಿಖೆ ಕುರಿತು ವಿಚಾರ ಮಾಡೋಣ ಎಂದು ಹೇಳಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗುತ್ತೆ ಅಂತ ವಿಶ್ವಾಸ ಮೂಡಿದೆ ಎಂದು ನಿರಂಜನ್ ಹಿರೇಮಠ್ ಹೇಳಿದರು.
ವಿಜಯ ಸಂಕಲ್ಪ ಸಮಾವೇಶದಲ್ಲಿ ನೇಹಾ ಪ್ರಕರಣ ಉಲ್ಲೇಖಿಸಿ ಮಾತನಾಡಿದ್ದ ಅಮಿತ್ ಶಾ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಯಾರು ಹೊಣೆ? ಮಹಿಳೆಯರಿಗೆ ಕರ್ನಾಟಕದ ಸುರಕ್ಷಿತವಲ್ಲ ಎಂದು ಅಮಿತ್ ಶಾ ಗಂಭೀರ ಆರೋಪವನ್ನು ಮಾಡಿದರು. ಮಹಿಳೆಯರ ರಕ್ಷಣೆ ನಿಮಗೆ ಆಗದಿದ್ದಲ್ಲಿ ಹೇಳಿ ನಾವು ಕರ್ನಾಟಕವನ್ನು ಸುರಕ್ಷಿತವಾಗಿ ಇಡ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.