ಹುಬ್ಬಳ್ಳಿ: ಇಂಡಿಗೋ ವಿಮಾನಗಳ ನಿರಂತರ ರದ್ದತಿ ಮತ್ತು ದೇಶವ್ಯಾಪಿ ಉದ್ವಿಗ್ನತೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಏರ್ಲೈನ್ಸ್ ವಹಿಸಿರುವ ನಿರ್ವಹಣೆಯ ವೈಫಲ್ಯವನ್ನು ತೀವ್ರವಾಗಿ ಟೀಕಿಸಿದರು.
“ನಾನು ಓದಿದ ಒಂದು ಸಂಪಾದಕೀಯದಲ್ಲಿ ಸರಕಾರ ‘ತುರ್ತು ನಿರ್ಧಾರ’ ತೆಗೆದುಕೊಂಡದ್ದು ಎಂದು ಬರೆದಿದ್ದರು. ಆದರೆ ಇದು ತುರ್ತು ನಿರ್ಧಾರವೇ ಅಲ್ಲ. ಇಂಡಿಗೋ ಏರ್ಲೈನ್ಸ್ ಹಲವು ತಿಂಗಳಿಂದ ಮಾಡಬೇಕಿದ್ದ ತಯಾರಿ ಮಾಡಿಕೊಳ್ಳಲಿಲ್ಲ,” ಎಂದು ಅವರು ಹೇಳಿದರು.
ಹೊಸ Flight Duty Time Limitations ಜಾರಿಗೆ ಬರಲು ತಿಂಗಳುಗಳಿದ್ದರೂ, ಸಿಬ್ಬಂದಿ ವ್ಯವಸ್ಥೆ, ನಿಯೋಜನೆ, ಕಾರ್ಯಾಚರಣೆ ಎಲ್ಲವೂ ಗೊಂದಲಕ್ಕೆ ದಾರಿ ಮಾಡಿಕೊಟ್ಟಿರುವುದನ್ನು ಜೋಶಿ ಗಮನಿಸಿದರು.
“DGCA ಒಂದು ನಿಯಂತ್ರಣ ಸಂಸ್ಥೆ. ನಾಗರಿಕ ವಿಮಾನಯಾನ ಮಂತ್ರಾಲಯದಡಿ DGCA ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದೆ. ಪ್ರಯಾಣಿಕರಿಗೆ 100% ರಿಫಂಡ್ ನೀಡಲೇಬೇಕು, ಯಾವುದೇ ರೀತಿಯ ಕ್ಯಾನ್ಸಲೇಶನ್ ಶುಲ್ಕ ವಿಧಿಸಬಾರದು. ಏರ್ಲೈನ್ನ ತಪ್ಪಿನಿಂದ ಈ ಸಂಕಷ್ಟ ಬಂದಿದೆ,” ಎಂದು ಜೋಶಿ ಹೇಳಿದರು.
ಸಿವಿಲ್ ಏವಿಯೇಷನ್ ಮಂತ್ರಿ ಸ್ವತಃ ದೆಹಲಿಯಲ್ಲಿ ಕುಳಿತು ಪರಿಸ್ಥಿತಿಯನ್ನು ನೇರವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
“ಇಂತಹ ಅವಘಡಗಳು ಕೆಲವೊಮ್ಮೆ ಸಂಭವಿಸುತ್ತವೆ. ಆದರೆ ಇಲಾಖೆಯು ಅದನ್ನು ಗಂಭೀರವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದೆ,” ಎಂದು ಜೋಶಿ ಹೇಳಿದರು.
ಬಂಗಾಳದ ‘ಬಾಬರಿ-ಶೈಲಿ’ ನಿರ್ಮಾಣ ವಿವಾದಕ್ಕೆ ಮಮತಾ ಹೊಣೆ: ಜೋಶಿ
ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ಮಾದರಿಯಂತೆ ಕಾಣುವ ಕಟ್ಟಡ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ ಜೋಶಿ ತೀವ್ರವಾಗಿ ಪ್ರತಿಕ್ರಿಯಿಸಿದರು.
“ಮಮತಾ ಬ್ಯಾನರ್ಜಿ ಬೆಂಬಲ ಇಲ್ಲದೆ ಇಂತಹದ್ದೇನೂ ನಡೆಯುವುದಿಲ್ಲ. ಅಧಿಕಾರಿಯನ್ನು ‘ಸಸ್ಪೆಂಡ್’ ಮಾಡಿರುವುದು ಕೇವಲ ನಾಟಕ,” ಎಂದು ವಾಗ್ದಾಳಿ ನಡೆಸಿದರು.
“ಇದು ತುಷ್ಟೀಕರಣ ರಾಜಕೀಯದ ಪರಾಕಾಷ್ಠೆ. ಬಾಬರಿ ಮಸೀದಿ ಮತ್ತು ಬಂಗಾಳಕ್ಕೆ ಏನು ಸಂಬಂಧ?” ಎಂದು ಪ್ರಶ್ನೆ ಎಸೆದರು.
ಒಂದು ಕಾಲದಲ್ಲಿ ಭಾರತದ GDPಯಲ್ಲಿ 26–27% ಹಂಚಿಕೆ ಹೊಂದಿದ್ದ ಬಂಗಾಳ, ಮಮತಾಳ ಕೆಟ್ಟ ಆಡಳಿತದಿಂದ ಇಂದು 3%ಕ್ಕೂ ಇಲ್ಲದ ಸ್ಥಿತಿಗೆ ಬಿದ್ದಿದೆ ಎಂದು ಅವರು ಟೀಕಿಸಿದರು.
“ಈ ಬಾರಿ ಜನರು ಮಮತಾ ಬ್ಯಾನರ್ಜಿ ಅವರಿಗೆ ಸೂಕ್ತ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ,” ಎಂದು ಜೋಶಿ ಹೇಳಿದರು.
