ತಿಂಗಳೊಳಗೆ ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ
ಲಾಕ್ಡೌನ್ ಮುಂದುವರಿಕೆ ವಿಚಾರ ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು
ಬೆಂಗಳೂರು:
ನಗರದಲ್ಲಿರುವ ಐಟಿಐ ಆಸ್ಪತ್ರೆಯನ್ನು ಇನ್ನು ಒಂದು ತಿಂಗಳೊಳಗಾಗಿ ನೂರು ಹಾಸಿಗೆಯ ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ಇಂದು ಇಲ್ಲಿ ಹೇಳಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರೊಂದಿಗೆ ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಐಟಿಐ ಆಸ್ಪತ್ರೆಯ ಸ್ಥಳ ವೀಕ್ಷಣೆ ಮಾಡಿದ ಕೇಂದ್ರ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ – ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಆದಷ್ಟು ಹೆಚ್ಚು ವೈದ್ಯಕೀಯ ಸೌಲಭ್ಯ ನೀಡಬೇಕು ಎಂಬ ಉದ್ದೇಶದಿಂದ ಇದನ್ನು ಪುನಶ್ಚೇತನಗೊಳಿಸಲಾಗುತ್ತಿದೆ ಎಂದರು.
ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾದ ರವಿಶಂಕರ ಅವರೊಂದಿಗೆ ತಾವು ಈ ಬಗ್ಗೆ ಚರ್ಚಿಸಿದ್ದು ಅವರು ಅದಕ್ಕೆ ಸಂತೋಷದಿಂದ ಸಮ್ಮತಿಸಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಸಚಿವ ಭೈರತಿ ಬಸವರಾಜ ಅವರು ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಪಡೆದಿದ್ದಾರೆ. ರೋಟರಿ ಸಂಸ್ಥೆ ಇದನ್ನು ಪುನಶ್ಚೇತನಗೊಳಿಸಲು ಮುಂದೆಬಂದಿದೆ. ಇದನ್ನು ಕಾಲಮಿತಿಯಲ್ಲಿ (1 ತಿಂಗಳು) ಕೋವಿಡ್ ಸೋಂಕಿತರ ಸೇವೆಗೆ ಸಿದ್ಧಪಡಿಸುವ ಬಗ್ಗೆ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ ಆರ್ ಅಗರ್ವಾಲ ಅವರು ಈಗಾಗಲೇ ರೋಟರಿಯವರೊಂದಿಗೆ ಚರ್ಚಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ಆಮ್ಲಜನಕ ಸೌಲಭ್ಯ ಅಳವಡಿತ ನೂರು ಹಾಸಿಗೆಗಳು, 20 ಕೊರೊನೇತರ ಹಾಸಿಗೆಗಳು ಇರಲಿವೆ. ಆಸ್ಪತ್ರೆ ಆವರಣದಲ್ಲಿಯೇ ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಕೊರೊನಾ ಪರೀಕ್ಷೆ (ಪಿಸಿಆರ್) ಪ್ರಯೋಗಾಲಯ ಹಾಗೂ ಲಸಿಕಾ ಕೇಂದ್ರ ಕೂಡಾ ಇದರಲ್ಲಿ ಇರಲಿವೆ. ಮುಂದಿನ ತಿಂಗಳಾರ್ಧದಲ್ಲಿ ಕೊರೊನಾ ಪೀಡಿತರ ಸೌಲಭ್ಯಕ್ಕೆ ಇದು ಲಭ್ಯವಾಗಲಿದೆ. ಹಾಗೆಯೇ ಸಂಭವನೀಯ ಮೂರನೇ ಅಲೆಯನ್ನು ಎದುರಿಸುವ ಸಿದ್ಧತೆಯ ಭಾಗವೂ ಇದಾಗಿದೆ. ದಿನದಿಂದ ದಿನಕ್ಕೆ ಇಲ್ಲಿ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಒಟ್ಟಿನಲ್ಲಿ ಮುಂದೆ ಇದನ್ನೊಂದು ಸುಪರ್ ಸ್ಪೆಷಿಯಾಲಿಟಿ ಆಸ್ಪತ್ರೆಯಾಗಿ ರೂಪಿಸುವ ದೂರದೃಷ್ಟಿಯೊಂದಿಗೆ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಸದಾನಂದ ಗೌಡ ತಿಳಿಸಿದರು.
ಕೊರೊನಾ ಮಹಾಮಾರಿ ಈ ಶತಮಾನ ಕಂಡ ಜಾಗತಿಕ ವಿಪತ್ತಾಗಿದೆ. ಇದನ್ನು ನೂರಕ್ಕೆ ನೂರು ಪ್ರಮಾಣದಲ್ಲಿ ಅಲ್ಲವಾದರೂ ಶೇಕಡಾ 90ರಷ್ಟು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದು ವಿಶ್ವಾಸದಿಂದ ಹೇಳಬಹುದು. ಆಮ್ಲಜನಕ ಪೂರೈಕೆಯೇ ಇರಬಹುದು ಅಥವಾ ರೆಮ್ಡೆಸಿವಿರ್ ಮುಂತಾದ ಔಷಧಗಳೇ ಇರಬಹುದು – ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಯಡಿಯೂರಪ್ಪ ಅವರ ಸರ್ಕಾರವು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರಿಂದಲೇ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದೆ ಎಂದು ಅವರು ತಿಳಿಸಿದರು.
ಲಾಕ್ಡೌನ್ ವಿಸ್ತರಣೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ ಈ ಬಗ್ಗೆ ರಾಜ್ಯ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ಕೇಂದ್ರ ಸಚಿವರು ನಂತರ ನಗರಾಭಿವೃದ್ಧಿ ಸಚಿವರೊಂದಿಗೆ ಎಚ್ಎಲ್ ಆವರಣದಲ್ಲಿ ಕೆಪಿಟಿಸಿಎಲ್, ಬೆಸ್ಕಾಂ ಸಹಯೋಗದಲ್ಲಿ ಸಿದ್ಧಪಡಿಸಲಾಗುತ್ತಿರುವ 80 ಹಾಸಿಗೆಯ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿನೀಡಿ ಸಿದ್ಧತೆ ವೀಕ್ಷಿಸಿದರು.
ಈ ಮಧ್ಯೆ, ಸಚಿವ ಸದಾನಂದ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ಫಾರ್ಮಾ ಮತ್ತಿತರ ಇಲಾಖಾ ವಿಷಯಗಳ ಬಗ್ಗೆ ನಡೆದ ಉನ್ನತ ಮಟ್ಟದ ಸಂಪುಟ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ಸಾಯಂಕಾಲ ನಡೆದ ಈ ಮಹತ್ವದ ಸಭೆಯಲ್ಲಿ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಹಾಗೂ ಧರ್ಮೇಂದ್ರ ಪ್ರಧಾನ್ ಪಾಲ್ಗೊಂಡರು.
ಇದಕ್ಕೆ ಮೊದಲು ಸಚಿವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ 9.5 ಕೋಟಿ ರೈತರಿಗೆ ಪ್ರಧಾನಿ ಅವರು ಇಂದು 8ನೇ ಕಂತಿನ ಹಣ 19,000 ಕೋಟಿ ರೂ ಬಿಡುಗಡೆ ಮಾಡಿದ ‘ವರ್ಚ್ವಲ್’ ಕಾರ್ಯಕ್ರಮದಲ್ಲಿ ಭಾಗಿಯಾದರು