ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಶುಕ್ರವಾರ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಅನುಜ್ ಅಗ್ನಿಹೋತ್ರಿ ಅವರು ದೇಶಕ್ಕೆ ಅಗ್ರಸ್ಥಾನ ಪಡೆದರೆ, ಕಿರಣ್ ಕಾಮತೆ ಅವರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಈ ಸಾಲಿನ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದ ಒಟ್ಟು 22 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ 53 ರ್ಯಾಂಕ್ ಗಳಿಸಿರುವ ಕಿರಣ್ ಕಾಮತೆ ಅವರು ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಕಿರಣ್ ಅವರು ಸದ್ಯ ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್ ಗಳಿಸಿರುವ ಸಂದೀಪ್ ಬಾಡದ್ ಅವರು, ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ ಮತ್ತು ರಾಜ್ಯದ ಕೆಎಲ್ ಸೂರಜ್ ಅವರು 525ನೇ ರ್ಯಾಂಕ್ ಗಳಿಸಿದ್ದಾರೆ.
ಈ ಸಲದ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶದಲ್ಲಿ ಬೆಂಗಳೂರಿನ ಕೋಚಿಂಗ್ ಸೆಂಟರ್ ‘ಇಂಡಿಯಾ 4 ಐಎಎಸ್ ಅಕಾಡಮಿ’ಯು ಅಮೋಘ ಸಾಧನೆ ಮಾಡಿದೆ. ರಾಜ್ಯದಲ್ಲಿ ಯುಪಿಎಸ್ಸಿ ಉತ್ತೀರ್ಣರಾದ 22 ಮಂದಿ ಅಭ್ಯರ್ಥಿಗಳ ಪೈಕಿ 19 ಮಂದಿ ಈ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದವರಾಗಿದ್ದಾರೆ.
