ಬೆಂಗಳೂರು: ನಗರದ ಕೆ.ಆರ್.ಪುರಂ ರೈಲ್ವೆ ನಿಲ್ದಾಣ ಸಮೀಪ ಸಾರ್ವಜನಿಕ ಶಿಸ್ತು ಪಾಲನೆ ಕುರಿತು ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು, ಟ್ರಾಫಿಕ್ ಕರ್ತವ್ಯದಲ್ಲಿದ್ದ ಮಹಿಳಾ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಘಟನೆ ರವಿವಾರ ನಡೆದಿದೆ.
ಗಾಯಗೊಂಡ ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲ್ಲೆ ನಡೆಸಿದ ಮೋಹಿನಿ ಎಂಬ ಯುವತಿಯನ್ನು ರಾಮಮೂರ್ತಿ ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಳೆದ 12 ವರ್ಷಗಳಿಂದ ಹೋಂ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ನರಸಮ್ಮ, ಕಳೆದ ಆರು ತಿಂಗಳಿಂದ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ಯುವತಿಯನ್ನು ಅಲ್ಲಿದ್ದ ಕೆಲವು ಯುವಕರು ಚುಡಾಯಿಸುತ್ತಿದ್ದರು. ಸಾರ್ವಜನಿಕರು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಹೋಂ ಗಾರ್ಡ್ ಅವರು “ಈ ರೀತಿ ಸರಿಯಾಗಿ ಬಟ್ಟೆ ಧರಿಸದೆ ರಸ್ತೆಗೆ ಬರಬೇಡಮ್ಮ” ಎಂದು ಬುದ್ಧಿವಾದ ಹೇಳಿದ್ದಾಗಿ ತಿಳಿದುಬಂದಿದೆ.
ಈ ಮಾತಿಗೆ ಕೋಪಗೊಂಡ ಯುವತಿ, “ನನಗೆ ಹೇಳಲು ನೀನು ಯಾರು?” ಎಂದು ಕೂಗಾಡುತ್ತಾ ಏಕಾಏಕಿ ಹೋಂ ಗಾರ್ಡ್ ಮೇಲೆ ಎರಗಿ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಸಮವಸ್ತ್ರದಲ್ಲಿದ್ದ ಮಹಿಳಾ ಹೋಂ ಗಾರ್ಡ್ ಮುಖಕ್ಕೆ ಹೊಡೆದು, ಮೈಮೇಲೆ ಪರಚಿ ಗಾಯಗೊಳಿಸಲಾಗಿದೆ. ಸ್ಥಳದಲ್ಲಿದ್ದವರು ಗಲಾಟೆ ಬಿಡಿಸಲು ಪ್ರಯತ್ನಿಸಿದರೂ, ಯುವತಿ ಯಾರ ಮಾತಿಗೂ ಕಿವಿಗೊಡದೆ ರಂಪಾಟ ಮುಂದುವರಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಕುರಿತು ಮಾತನಾಡಿದ ಲಕ್ಷ್ಮೀ ನರಸಮ್ಮ, “ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಬುದ್ಧಿವಾದ ಹೇಳಿದ್ದಕ್ಕೆ ನನ್ನ ಮೇಲೆ ಈ ರೀತಿ ದೌರ್ಜನ್ಯ ನಡೆದಿದೆ. ಕರ್ತವ್ಯದಲ್ಲಿರುವ ಮಹಿಳೆಯರಿಗೆ ರಕ್ಷಣೆ ಸಿಗಬೇಕು. ಹಲ್ಲೆ ಮಾಡಿದವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು,” ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಸಂಘಟನೆಗಳ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿತೆಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
