ಬೆಂಗಳೂರು: ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸುಮಾರು 3,072 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಇದರಲ್ಲಿ 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಿರುವುದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಬ್, ಲೆಕ್ಕಾಧಿಕಾರಿ, ಪರಶುರಾಮ್, ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್, ಈತನ ಸಂಬಂಧಿ ನಾಗೇಶ್ವರ್ ರಾವ್, ಹೈದರಾಬಾದ್‍ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‍ನ ಎಂಡಿ ಸತ್ಯನಾರಾಯಣವರ್ಮಾ, ಸತ್ಯನಾರಾಯಣ ಇಟರಿ, ಸಾಯಿತೇಜ ಸೇರಿದಂತೆ 12 ಜನರನ್ನು ಆರೋಪಿಗಳಾಗಿ ತೋರಿಸಲಾಗಿದೆ. ಚಿನ್ನಾಭರಣ, ನಗದು ಸೇರಿ ಒಟ್ಟು 50 ಕೋಟಿ ರೂ. ಮೌಲ್ಯದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತನಿಖಾಧಿಕಾರಿ ಬಿ.ಎಸ್.ಶ್ರೀನಿವಾಸ್ ರಾಜ್ ಚಾರ್ಜ್‍ಶೀಟ್‍ನಲ್ಲಿ ವಿವರಿಸಿದ್ದಾರೆ.