ಮಂಗಳೂರು:
ಅಕ್ಟೋಬರ್ ಅಂತ್ಯದ ವೇಳೆಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಕಟೀಲ್ ಇಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುರಿತು ಭರವಸೆ ಸಿಕ್ಕಿದೆ. ಬೆಂಗಳೂರು-ಕಣ್ಣೂರು ರೈಲನ್ನು ಕೊಚ್ಚಿವರೆಗೆ ವಿಸ್ತರಿಸಬೇಕೆಂಬ ಕೇರಳದ ಬೇಡಿಕೆಗೆ ಮಣಿಯದಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಈ ಸಲಹೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಮಂಗಳೂರಿಗೆ ಮುಂಜಾನೆ ರೈಲು ಮತ್ತು ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಜೆ ರೈಲು ಓಡಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಬದಲು ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ (ಎಸ್‌ಡಬ್ಲ್ಯುಆರ್) ಸೇರಿಸುವಂತೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ.