ಬೆಂಗಳೂರು, ಜನವರಿ 27: ಗ್ರಾಮೀಣ ಬಡವರ ಸಂವಿಧಾನಾತ್ಮಕ ಕೆಲಸದ ಹಕ್ಕನ್ನು ಕಸಿದುಕೊಳ್ಳುವ VBGRG ಕಾಯ್ದೆ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಮಾರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನ ಲೋಕಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನಪರ ಚಿಂತನೆಯಿಂದ ಜಾರಿಗೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾಯ್ದೆ (ಮನರೇಗಾ) ಬಡವರು, ಸಣ್ಣ ರೈತರು ಮತ್ತು ಮಹಿಳೆಯರಿಗೆ ವರ್ಷಕ್ಕೆ 100 ದಿನಗಳ ಕೆಲಸವನ್ನು ಖಾತ್ರಿಪಡಿಸುತ್ತಿತ್ತು ಎಂದು ನೆನಪಿಸಿದರು.
ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಮನರೇಗಾ ಬಚಾವ್ ಸಂಗ್ರಾಮ್’ ಅಂಗವಾಗಿ ನಡೆದ ಬೃಹತ್ ಪ್ರತಿಭಟನೆ ಮತ್ತು ರಾಜಭವನ ಚಲೋ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
VBGRG ಕಾಯ್ದೆಯಡಿ ಬಡ ಕಾರ್ಮಿಕರಿಗೆ ಕೆಲಸ ಸಿಗುವ ಯಾವುದೇ ಖಾತ್ರಿ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕರ್ನಾಟಕದಲ್ಲೇ ಸುಮಾರು 71 ಲಕ್ಷ ಕಾರ್ಮಿಕರು ಇದ್ದು, ಇವರಲ್ಲಿ ಶೇ.53ರಷ್ಟು ಮಹಿಳೆಯರು, ಶೇ.28ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಹಾಗೂ ಸುಮಾರು 5 ಲಕ್ಷ ಅಂಗವಿಕಲ ಕಾರ್ಮಿಕರು ಇದ್ದಾರೆ ಎಂದು ಅವರು ವಿವರಿಸಿದರು.
ಹೊಸ ಕಾಯ್ದೆಯಡಿ ಕಾರ್ಮಿಕರು ಕೆಲಸ ಮಾಡುವ ಸ್ಥಳ ಮತ್ತು ದಿನಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ. ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ಕೇವಲ 60 ದಿನ ಮಾತ್ರ ಕೆಲಸ ಮಾಡುವಂತಾಗಿದ್ದು, ಇದು ಗ್ರಾಮೀಣ ಜೀವನಾಧಾರಕ್ಕೆ ಗಂಭೀರ ಹೊಡೆತವಾಗಿದೆ ಎಂದು ಹೇಳಿದರು.
ಇನ್ನೂ ಕೇಂದ್ರ ಸರ್ಕಾರ ಸಂಪೂರ್ಣ ಅನುದಾನ ನೀಡದೆ ಕೇವಲ ಶೇ.60ರಷ್ಟನ್ನು ಮಾತ್ರ ನೀಡುತ್ತಿದ್ದು, ಉಳಿದ ಶೇ.40ರಷ್ಟನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗಿದೆ. ಇದು ಜನವಿರೋಧಿ ಹಾಗೂ ರಾಜ್ಯಗಳಿಗೆ ಅನ್ಯಾಯಕರ ಕಾಯ್ದೆಯಾಗಿದೆ ಎಂದು ಸಿಎಂ ಆರೋಪಿಸಿದರು.
ಈ ಕಾಯ್ದೆಯ ಹಿಂದೆ ಬಿಜೆಪಿ–ಆರ್ಎಸ್ಎಸ್ ಪ್ರೇರಣೆಯಿದ್ದು, ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಾರದು ಎಂಬ ದುರುದ್ದೇಶ ಇದಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. “ಬಡವರನ್ನು ಸೇವಕರಾಗಿಯೇ ಇಡುವುದು ಇವರ ರಾಜಕೀಯ ಉದ್ದೇಶ,” ಎಂದರು.
VBGRG ಕಾಯ್ದೆ ರದ್ದುಗೊಳಿಸಿ ಮನರೇಗಾವನ್ನು ಸಂಪೂರ್ಣವಾಗಿ ಪುನರ್ಸ್ಥಾಪಿಸುವವರೆಗೂ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
