ಬೆಂಗಳೂರು:
ಯಾವುದೇ ಮಾರಾಟ ಅಥವಾ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮುನ್ನ ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನು ಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕರಿಗೆ ಆದೇಶ ನೀಡಿದೆ.
ಅನಾಮಧೇಯ ವ್ಯಕ್ತಿ ಮಾರಾಟ ಮಾಡಿದ್ದಾರೆಂಬ ಆಧಾರದ ಮೇಲೆ ತಮ್ಮ ಭೂಮಿಯ ಖುಣಭಾರ ಪತ್ರ (ಇಸಿ) ದಲ್ಲಿ ನೋಂದಾಯಿಸಿರುವ ಹೆಸರು ತೆಗೆಯುವಂತೆ ಕೋರಿದ್ದ ಮನವಿ ತಿರಸ್ಕರಿಸಿದ್ದ ಸಬ್ ರಿಜಿಸ್ಟ್ರಾರ್ ಕ್ರಮವನ್ನು ಪ್ರಶ್ನಿಸಿ ರಾಜೇಶ್ ತಿಮ್ಮಣ್ಣ ಉಮಾರಾಣಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ನ್ಯಾಯ ಪೀಠ, ಈ ಆದೇಶ ನೀಡಿದೆ.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಆಧಾರ್ (ನಿರ್ದಿಷ್ಟ ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ವಿತರಣೆ) ಕಾಯಿದೆ- 2016ರ ಪ್ರಕಾರ ಯುಐಡಿಎಐನೊಂದಿಗೆ ನೋಂದಣಿ ಮಾಡಿಕೊಂಡಿರುವ ಯಾವುದೇ ಸೇವಾ ಪೂರೈಕೆದಾರರು ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಅದರ ಅಧಿಕೃತತೆಯನ್ನು ಪರಿಶೀಲಿಸಿಕೊಳ್ಳಬೇಕಿದೆ ಎಂದು ಹೇಳಿದೆ.
ಆಧಾರ್ ಕಾಯಿದೆ- 2016ರ ಅನ್ವಯ ಇನ್ಸ್ ಪೆಕ್ಟರ್ ಜನರಲ್ ಆಫ್ ರಿಜಿಸ್ಪ್ರೇಷನ್ ಯುಐಎಡಿಐ ಜತೆ ನೋಂದಾಯಿಸಿಕೊಳ್ಳಬೇಕು. ಆನಂತರ ಯಾವುದೇ ವ್ಯಕ್ತಿ ನಿವೇಶನ ಅಥವಾ ಮನೆ ಮಾರಾಟ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಆಗಮಿಸಿದಾಗ ಅವರು ನೀಡಿರುವ ಆಧಾರ್ ನ ನೈಜತೆ ಪರಿಶೀಲಿಸಬೇಕು ಮತ್ತು ಆ ರೀತಿ ಪರಿಶೀಲನೆ ನಡೆಸಿದ ನಂತರವೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣವೇನು?:
ಈ ಪ್ರಕರಣದಲ್ಲಿ ದಾಖಲೆ ನಕಲು ಮಾಡಿ ಭೂಮಿ ಮಾರಾಟ ಮಾಡಿದ್ದಾರೆಂದು ಆರೋಪಿಸಲಾದ ರಮೇಶ್ ಎಂಬ ವ್ಯಕ್ತಿ ನೋಂದಣಿ ವೇಳೆ ಆಧಾರ್ ದಾಖಲೆ ಸಲ್ಲಿಸಿದ್ದು, ಅದನ್ನು ಅಧಿಕೃತ ದಾಖಲೆ ಅಥವಾ ಗುರುತಿನ ಚೀಟಿ ಎಂದು ಪರಿಗಣಿಸಿ ಉಪ ನೋಂದಣಾಧಿಕಾರಿ ನೋಂದಣಿ ಮಾಡಿದ್ದಾರೆ. ಆದರೆ, ಆಧಾರ್ ನೈಜತೆ ಪರಿಶೀಲಿಸದೇ ಇರುವುದರಿಂದ ವ್ಯಾಜ್ಯಕ್ಕೆ ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.