
Vijayanagar District Progress Review Meeting postponed as Newly elected MLA's Training in Karnataka is scheduled: Minister Zameer Ahmed
ಬೆಂಗಳೂರು:
ವಿಜಯನಗರ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ಶಾಸಕರ ಮನವಿ ಮೇರೆಗೆ ಮುಂದೂಡಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಗೌರವನ್ವಿತ ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಶಿಬಿರ ಆಯೋಜನೆ ಮಾಡಿದ್ದು, ಮುಖ್ಯಮಂತ್ರಿ ಸಹಿತ ಹಲವು ಗಣ್ಯರು ಭಾಗಿ ಆಗಲಿರುವ ಈ ಶಿಬಿರದಲ್ಲಿ ವಿಜಯನಗರ ಜಿಲ್ಲೆಯಿಂದ ಆಯ್ಕೆಯಾದ ಶಾಸಕರು ಪಾಲ್ಗೊಳ್ಳುವುದು ಅವಶ್ಯಕ ವಾಗಿದೆ. ಈ ಹಿನ್ನಲೆಯಲ್ಲಿ ಶಾಸಕರ ಮನವಿ ಮೇರೆಗೆ ಸೋಮವಾರ ಮತ್ತು ಮಂಗಳವಾರ ನಿಗದಿಯಾಗಿದ್ದ ಪ್ರಗತಿ ಪರಿಶೀಲನೆ ಸಭೆ ಜುಲೈ 1 ಮತ್ತು 2 ಕ್ಕೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವನಾದ ಬಳಿಕ ಪ್ರಗತಿ ಪರಿಶೀಲನೆ ಸಭೆ ಹಾಗೂ ಜನಸಂಪರ್ಕ ಸಭೆ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಅಧಿಕಾರಿಗಳ ಜತೆ ನಿರಂತರ ಸಮಾಲೋಚನೆ ನಡೆಸಿ ದಿನಾಂಕ ನಿಗದಿ ಮಾಡಲಾಗಿತ್ತು. ಸಭೆಗೆ ಅಧಿಕಾರಿಗಳು ಸಹ ಸಿದ್ಧತೆ ಮಾಡಿಕೊಂಡಿದ್ದರು. ಅನಿವಾರ್ಯ ಕಾರಣದಿಂದಾಗಿ ಭೇಟಿ ಮುಂದೂಡಬೇಕಾಗಿದೆ. ಮುಂದಿನ ಶನಿವಾರ ಮತ್ತು ಭಾನುವಾರ ತಪ್ಪದೇ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯ ಜನತೆಯ ಸಹಕಾರ ಇರಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಚಿವರು ಮನವಿ ಮಾಡಿದ್ದಾರೆ.