ವಿಜಯಪುರ: ಸಿನಿಮಾ ಕಥಾನಕಕ್ಕೆ ಕಡಿಮೆಯಿಲ್ಲದಂತೆ, ಮಿಲಿಟರಿ ಉಡುಪು ಧರಿಸಿದ ದರೋಡೆಕೋರರ ಗ್ಯಾಂಗ್ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಗೆ ನುಗ್ಗಿ, ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಕಟ್ಟಿ ಹಾಕಿ 50 ಕೆಜಿ ಚಿನ್ನಾಭರಣ ಹಾಗೂ ಸುಮಾರು ₹8 ಕೋಟಿ ನಗದು ದೋಚಿ ಪರಾರಿಯಾಯಿತು.
ಘಟನೆ ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ನಡೆದಿದೆ. ಐದಕ್ಕೂ ಹೆಚ್ಚು ಮುಖವಾಡದ ದುಷ್ಕರ್ಮಿಗಳು ಕೈಯಲ್ಲಿ ಕಂಟ್ರಿ ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ಹಿಡಿದು ಬ್ಯಾಂಕ್ ಒಳನುಗ್ಗಿ, ಮ್ಯಾನೇಜರ್, ಕ್ಯಾಶಿಯರ್ ಹಾಗೂ ಸಿಬ್ಬಂದಿಯನ್ನು ಬೆದರಿಸಿ, ಅಲಾರ್ಮ್ ಬಟನ್ ಒತ್ತದಂತೆ ತಡೆದು ಕೈಕಾಲುಗಳನ್ನು ಕಟ್ಟಿ ಹಾಕಿದರು. ನಂತರ ಲಾಕರ್‌ಗಳನ್ನು ಒಡೆದು ಚಿನ್ನಾಭರಣ ಮತ್ತು ನಗದು ದೋಚಿದರು.

ಘಟನೆಯ ನಂತರ ದುಷ್ಕರ್ಮಿಗಳು ಮಹಾರಾಷ್ಟ್ರದತ್ತ ಪರಾರಿಯಾದರೆಂಬ ಶಂಕೆ ವ್ಯಕ್ತವಾಗಿದೆ. ಹೋಳಜಂತಿ ಮಾರ್ಗದ ಮೂಲಕ ಗುಂಪು ಚದುರಿ ಓಡಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರ್ಗಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ಫರೆನ್ಸಿಕ್ ತಂಡವನ್ನು ಸ್ಥಳಕ್ಕೆ ಕರೆಸಿ ಸಾಕ್ಷ್ಯ ಸಂಗ್ರಹಿಸಲಾಯಿತು. ಬ್ಯಾಂಕ್‌ನ ಸಿಸಿಟಿವಿ ಡಿವಿಆರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಈಗಾಗಲೇ ಕೆಎ 24 ಡಿಎಚ್ 2456 ನಂಬರಿನ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ನಿಖರವಾಗಿ ಎಷ್ಟು ಪ್ರಮಾಣದ ಚಿನ್ನಾಭರಣ ಮತ್ತು ನಗದು ದೋಚಲಾಗಿದೆ ಎಂಬುದನ್ನು ಎಸ್‌ಬಿಐ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ ನಂತರವೇ ತಿಳಿಯಲಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಇತ್ತೀಚೆಗೆ ಇದೇ ರೀತಿಯಲ್ಲಿ ಬಸವನ ಬಾಗೇವಾಡಿ ತಾಲೂಕಿನ ಮನಗೋಳಿ ಪಟ್ಟಣದಲ್ಲೂ 48 ಕೆಜಿ ಚಿನ್ನಾಭರಣ ಹಾಗೂ ₹5 ಲಕ್ಷ ನಗದು ದರೋಡೆ ನಡೆದಿದ್ದು, ಕರ್ನಾಟಕದಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳ ಏರಿಕೆ ಬಗ್ಗೆ ಆತಂಕ ಹೆಚ್ಚಿಸಿದೆ.