ಬೆಂಗಳೂರು:
ಸಂಚಾರ ನಿಯಮ ಉಲ್ಲಂಘನೆ ಆರೋಪದಲ್ಲಿ ದಂಡದ ಮೊತ್ತವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮಾತ್ರ ಅಧಿಕಾರವಿದೆ. ಸಂಚಾರ ಪೊಲೀಸರು ಆರೋಪಿಗಳಿಂದ ದಂಡದ ಮೊತ್ತ ವಸೂಲಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಹೆಲ್ಮೆಟ್ ಧರಿಸದೇ ಇರುವುದಕ್ಕೆ ದಂಡ ಪಾವತಿಸಲು ನಿರಾಕರಿಸಿದ ಮತ್ತು ಬಲಪ್ರಯೋಗ ನಡೆಸಿ ಸರಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಆರೋಪ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದು ಮಾಡುವಂತೆ ಕೋರಿ ಕೆ.ಆರ್. ಪೇಟೆ ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ.ಟಿ. ನಟರಾಜು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ವಾಹನ ತಪಾಸಣಾ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಯನ್ನು ತಡೆಯಬೇಕು. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಠಾಣೆಯ ಪೊಲೀಸರನ್ನು ಕರೆಯಿಸಿ, ಆರೋಪಿಯನ್ನು ವಶಕ್ಕೆ ನೀಡಬೇಕು. ಇಲ್ಲದಿದ್ದರೆ ಹಲ್ಲೆ ಹಾಗೂ ಬಲಪ್ರಯೋಗ ನಡೆಸಿ ಸರಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಜೊತೆಗೆ, ಪೊಲೀಸರು ಈ ಯಾವುದೇ ಮಾನದಂಡ ಅಥವಾ ನಿಯಮವನ್ನು ಕೆ.ಟಿ.ನಟರಾಜು ಮೇಲೆ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಪಾಲಿಸಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಆತನ ವಿರುದ್ಧದ ಪ್ರಕರಣ ರದ್ದುಪಡಿಸಿದೆ.