ಬೆಂಗಳೂರು:
ಕೋವಿಡ್ ಎರಡನೇ ಅಲೆಯ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಏರೋ ಇಂಡಿಯಾ–2021 ಕಾರ್ಯಕ್ರಮವನ್ನು ‘ಹೈಬ್ರಿಡ್’ ಮಾದರಿಯಲ್ಲಿ ಅಂದರೆ ಕೆಲವೇ ಜನರಿಗೆ ಸೀಮಿತಗೊಳಿಸಿ ನಡೆಸುವಂತೆ ಕೇಂದ್ರ ರಕ್ಷಣಾ ಇಲಾಖೆಗೆ ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರ 2021ರ ಫೆಬ್ರುವರಿ 3 ರಿಂದ 7ರವರೆಗೆ ಯಲಹಂಕದ ವಾಯುನೆಲೆಯಲ್ಲಿ 13ನೇ ಅಂತರಾಷ್ಟ್ರೀಯ ಏರೋ ಇಂಡಿಯಾ–2021 ನಡೆಸಲು ಮುಂದಾಗಿದೆ. ಈ ಸಂಬಂಧ ಮಾಧ್ಯಮ ನೋಂದಣಿ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಆದರೆ, ಜನವರಿ – ಫೆಬ್ರವರಿ ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಕುರಿತು ತಜ್ಞರ ವರದಿ ಹಿನ್ನೆಲೆಯಲ್ಲಿ ಜನಸಂದಣಿ ಉಂಟಾಗದಂತೆ ತಡೆಯಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದಾರೆ.
ಐದು ದಿನಗಳು ನಡೆಯುವ ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಕೋವಿಡ್ ಕಾರಣ ಕೆಲವರಿಗೆ ಮಾತ್ರ ಪ್ರವೇಶ ನೀಡಬೇಕು. ಜನರಿಗೆ ವರ್ಚುವಲ್ ವೇದಿಕೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಶಿಫಾರಸು ಮಾಡಲಾಗಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಈ ಬಗ್ಗೆ ಸಭೆ ನಡೆಸಿ, ಎಷ್ಟು ಮಂದಿಗೆ ಪ್ರವೇಶ ನೀಡಬಹುದು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಐದು ವಿಭಾಗಗಳಲ್ಲಿ ಪಾಸ್‌ಗಳನ್ನು ನೀಡಿದಲ್ಲಿ ಮೊದಲೆರಡು ವಿಭಾಗಗಳ ಪಾಸ್ ಪಡೆದವರಿಗೆ ಮಾತ್ರ ಪ್ರವೇಶ ನೀಡಬೇಕಾಗುತ್ತದೆ. ಉಳಿದ ವಿಭಾಗದ ಪಾಸ್ ಪಡೆದವರು ವರ್ಚುವಲ್ ಮಾದರಿಯಲ್ಲಿ ವೀಕ್ಷಿಸಬೇಕಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.